petrol, Diesel and GST
petrol, Diesel and GST 
ಸುದ್ದಿಗಳು

ಜಿಎಸ್‌ಟಿ ವ್ಯಾಪ್ತಿಯಿಂದ ಪೆಟ್ರೋಲ್‌‌, ಡೀಸೆಲ್ ಹೊರಗೆ: ಜಿಎಸ್‌ಟಿ ಮಂಡಳಿಯಿಂದ ವಿವರಣೆ ಕೇಳಿದ ಕೇರಳ ಹೈಕೋರ್ಟ್

Bar & Bench

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರಿಸದಿರುವ ತನ್ನ ನಿರ್ಧಾರದ ಹಿಂದಿರುವ ಕಾರಣಗಳನ್ನು ವಿವರಿಸುವಂತೆ ಕೇರಳ ಹೈಕೋರ್ಟ್‌ ಸೋಮವಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಗೆ ಸೂಚಿಸಿದೆ [ಕೇರಳ ಪ್ರದೇಶ ಗಾಂಧಿ ದರ್ಶನವೇದಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೇರಳ ಪ್ರದೇಶ ಗಾಂಧಿ ದರ್ಶನವೇದಿ ಎಂಬ ಸಂಘಟನೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ಈ ಕುರಿತು ಹತ್ತು ದಿನಗಳಲ್ಲಿ ಹೇಳಿಕೆ ಸಲ್ಲಿಸುವಂತೆ ಜಿಎಸ್‌ಟಿ ಮಂಡಳಿಗೆ ಸೂಚಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ಇತ್ತೀಚಿನ ತೀವ್ರ ಏರಿಕೆ ಸಾಮಾನ್ಯ ಆರ್ಥಿಕ ಸ್ಥಿರತೆ ಮೇಲೆ ಮಾತ್ರವಲ್ಲದೆ ಜನಸಾಮಾನ್ಯರ ಜೀವನದ ಮೇಲೆ, ವಿಶೇಷವಾಗಿ ಕಡಿಮೆ ಆದಾಯದ ಕುಟುಂಬಗಳ ಬದುಕಿನ ಮೇಲೆ ಮಾರಕ ಪರಿಣಾಮ ಬೀರಿದೆ ಎಂದು ವಕೀಲ ಅರುಣ್ ಬಿ ವರ್ಗೀಸ್ ಅವರ ಮೂಲಕ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿದೆ.

ʼವಿಭಜಿತ ತೆರಿಗೆ ನೀತಿಗಳʼ ಅಡಿಯಲ್ಲಿ ರಾಜ್ಯ ಸರ್ಕಾರಗಳು ವಿಧಿಸುವ ವಿಭಿನ್ನ ತೆರಿಗೆ ದರಗಳಿಂದಾಗಿ ಭಾರತದ ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಭಿನ್ನ ದರಗಳನ್ನು ವಿಧಿಸಲಾಗುತ್ತಿದೆ. ಇದು ಸಂವಿಧಾನದ 279 ಎ (6) ವಿಧಿಯಡಿಯಲ್ಲಿ ಕಲ್ಪಿಸಲಾಗಿರುವ ಹೊಂದಾಣಿಕೆಯ ರಾಷ್ಟ್ರೀಯ ಮಾರುಕಟ್ಟೆ ಸಾಧನೆಗೆ ಅಡ್ಡಿಯಾಗಿದೆ. ಪೆಟ್ರೋಲಿಯಂ ಕಂಪನಿಗಳು ಮಾರುಕಟ್ಟೆ ಶಕ್ತಿಗಳ ಆಧಾರದ ಮೇಲೆ ಕಚ್ಚಾ ತೈಲ ಬೆಲೆಯನ್ನು ನಿಗದಿಪಡಿಸಬೇಕಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ ದರ ಪೆಟ್ರೋಲ್ ಮತ್ತು ಡೀಸೆಲ್‌ನ ಒಟ್ಟು ಬೆಲೆಯ ಕನಿಷ್ಠ ಶೇ 60ರಷ್ಟಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಆಡಳಿತದ ಅಡಿಯಲ್ಲಿ ತಂದರೆ ರಾಷ್ಟ್ರದಾದ್ಯಂತ ಹೊಂದಾಣಿಕೆ ಮಾರುಕಟ್ಟೆ ಇರಲಿದ್ದು ಗರಿಷ್ಠ ತೆರಿಗೆ ದರವು ಶೇ 28ರಷ್ಟಾಗಲಿದೆೆ ಎಂದು ಮನವಿ ತಿಳಿಸಿದೆ.

ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಕೋರಿ ಜಿಎಸ್‌ಟಿ ಮಂಡಳಿಗೆ ಸಲ್ಲಿಸಿದ ಮನವಿಗೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅರ್ಜಿದಾರರು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು.

ಜಿಎಸ್‌ಟಿ ಮಂಡಳಿ ಯಾವುದೇ ನಿರ್ಧಾರ ಕೈಗೊಳ್ಳುವುದು ಕಡ್ಡಾಯವಲ್ಲ ಆದ್ದರಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಭಾರತ ಒಕ್ಕೂಟಕ್ಕೆ (ಕೇಂದ್ರ ಸರ್ಕಾರಕ್ಕೆ) ತಿಳಿಸಲು ಮಾತ್ರ ಜಿಎಸ್‌ಟಿ ಕೌನ್ಸಿಲ್‌ಗೆ ನಿರ್ದೇಶನ ನೀಡಲು ನಿರ್ಧರಿಸಿದೆ ಎಂದು ತನ್ನ ಹಿಂದಿನ ನಿರ್ಧಾರವನ್ನು ನ್ಯಾಯಾಲಯ ತಿಳಿಸಿತ್ತು.

ಆದರೂ, ಅರ್ಜಿದಾರರ ಅಹವಾಲನ್ನು ಜಿಎಸ್‌ಟಿ ಮಂಡಳಿ ತನ್ನ 45ನೇ ಸಭೆಯಲ್ಲಿ ಪರಿಗಣಿಸಿದ ನಂತರ, ಈ ಹಂತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಯಲ್ಲಿ ಸೇರಿಸುವುದು ಸೂಕ್ತವಲ್ಲ ಎಂದು ಅದು ನಿರ್ಧರಿಸಿತು. ಇದನ್ನು ಈಗ ಅರ್ಜಿದಾರರು ತೀವ್ರವಾಗಿ ವಿರೋಧಿಸಿದ್ದಾರೆ.

"ಇಂತಹ ನಿರ್ಧಾರ ತೆಗೆದುಕೊಳ್ಳಲು ಯಾವುದೇ ಬುದ್ಧಿ ಉಪಯೋಗಿಸಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿದಿನವೂ ಏರುತ್ತಿರುವಾಗ ಪ್ರಸ್ತುತ ಹಂತವು ನಿರ್ಧಾರ ತೆಗೆದುಕೊಳ್ಳಲು ಪಕ್ವವಾಗಿಲ್ಲವೇಕೆ ಎಂಬುದಕ್ಕೆ ಯಾವುದೇ ಸಮರ್ಥನೆ ಇಲ್ಲ" ಎಂದು ಮನವಿಯಲ್ಲಿ ತಿಳಿಸಲಾಗಿದೆ.

"ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಉಂಟಾಗಿರುವ ಭಾರಿ ಹೆಚ್ಚಳ ಸಾರ್ವಜನಿಕರನ್ನು ಅಪಾರ ಸಂಕಷ್ಟಕ್ಕೆ ತಳ್ಳುತ್ತದೆ. ಇದರಿಂದ ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಜೀವಿಸುವ ಹಕ್ಕನ್ನು ಉಲ್ಲಂಘಿಸಿದಂತಾಗಿದೆ" ಎಂದು ಅರ್ಜಿಯಲ್ಲಿ ಹೇಳಲಾಗಿದೆ. ನವೆಂಬರ್ 19 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.