Dog 
ಸುದ್ದಿಗಳು

ಬೀದಿ ನಾಯಿ ಕಡಿತ: ಪರಿಹಾರ ನೀಡಿಕೆಗಾಗಿ ಜಿಲ್ಲಾ ಸಂಸ್ಥೆಗಳ ರಚನೆಗೆ ಕೇರಳ ಹೈಕೋರ್ಟ್ ಆದೇಶ

"ಪ್ರಾಣಿ ಹಕ್ಕುಗಳನ್ನು ಗೌರವಿಸಬೇಕಾದರೂ, ಅವು ಮಾನವರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವಂತಿಲ್ಲ. ಆದರೂ, ಸಹಬಾಳ್ವೆಯ ಸಮತೋಲನ ಕಾಯ್ದುಕೊಳ್ಳಬೇಕು" ಎಂದು ನ್ಯಾಯಾಲಯ ಹೇಳಿದೆ.

Bar & Bench

ಕೇರಳ ರಾಜ್ಯದಲ್ಲಿ ಬೀದಿ ನಾಯಿ ಕಡಿತಕ್ಕೆ ತುತ್ತಾದವರಿಗೆ ಪರಿಹಾರ ನೀಡಲು ಜಿಲ್ಲಾ ಸಮಿತಿ ರಚಿಸುವಂತೆ ತಾನು ನೀಡಿದ್ದ ಸಲಹೆ ಜಾರಿಗೆ ತರಬೇಕು ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ  [ಕೀರ್ತನಾ ಸರಿನ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ ಮತ್ತು ಸಂಬಂಧಿತ ದಾವೆಗಳು].

ಕೇರಳದಲ್ಲಿ ಬೀದಿ ನಾಯಿ ಕಡಿತ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸಿ ಎಸ್ ಡಯಾಸ್ "ಪ್ರಾಣಿ ಹಕ್ಕುಗಳನ್ನು ಗೌರವಿಸಬೇಕಾದರೂ, ಅವು ಮಾನವರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವಂತಿಲ್ಲ. ಸುಪ್ರೀಂ ಕೋರ್ಟ್‌ ಕೂಡ ಈ ವಿಚಾರ ತಿಳಿಸಿದೆ” ಎಂದರು.

Justice CS Dias

ಕೇರಳದಲ್ಲಿ ಕಳೆದ ಆರು ತಿಂಗಳಲ್ಲಿ ನಾಯಿ ದಾಳಿಯಿಂದ 16 ಜನ ಸಾವನ್ನಪ್ಪಿದ್ದು, 1 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 50 ಲಕ್ಷ ಬೀದಿ ನಾಯಿಗಳಿವೆ. ಈ ಬಗ್ಗೆ ಏನಾದರೂ ಮಾಡಬೇಕಿದೆ. ಜನ ರಸ್ತೆಯಲ್ಲಿ ಭೀತಿಯಿಲ್ಲದೆ ನಡೆದಾಡುವಂತಾಗಬೇಕು ಎಂದು ಪೀಠ ಹೇಳಿದೆ.

ಬೀದಿ ನಾಯಿ ಕಡಿತಕ್ಕೊಳಗಾದವರಿಗೆ ಪರಿಹಾರ ನೀಡುವುದಕ್ಕಾಗಿ ಒಂದು ತಿಂಗಳೊಳಗೆ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಜಿಲ್ಲಾ ಸಂಸ್ಥೆಗಳನ್ನು ರಚಿಸುವಂತೆ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಲ್ಸಾ) ನ್ಯಾಯಾಲಯ ನಿರ್ದೇಶನ ನೀಡಿತು.

ನಾಯಿ ಕಡಿತಕ್ಕೆಸಂಬಂಧಿಸಿದ ದೂರುಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಎದುರು ಭೌತಿಕ ಮತ್ತು ಆನ್‌ಲೈನ್ ಸ್ವರೂಪದಲ್ಲಿ ಸಲ್ಲಿಸಬಹುದು ಎಂದು ಅದು ತಿಳಿಸಿದೆ.

ನಾಯಿ ಕಡಿತ ಪರಿಹಾರ ಪ್ರಕರಣಗಳನ್ನು ನಿರ್ವಹಿಸುವಾಗ ನ್ಯಾಯಮೂರ್ತಿ ಸಿರಿ ಜಗನ್ ಸಮಿತಿಯು ಈ ಹಿಂದೆ ರೂಪಿಸಿದ್ದ ಕಾರ್ಯವಿಧಾನಗಳನ್ನು ಹೊಸ ಸಮಿತಿಗಳು ಅಳವಡಿಸಿಕೊಳ್ಳಬೇಕು ಎಂದು ಪೀಠ ಹೇಳಿದೆ.

ಈ ಸಂಬಂಧ ಹಿಂದೆ ನೀಡಲಾಗಿದ್ದ ವಿವಿಧ ತೀರ್ಪುಗಳನ್ನು ಪ್ರಸ್ತಾಪಿಸಿದ ಅದು "ಪ್ರಾಣಿ ಹಕ್ಕುಗಳನ್ನು ಗೌರವಿಸಬೇಕಾದರೂ, ಅವು ಮಾನವರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವಂತಿಲ್ಲ. ಆದರೂ ಸಹಬಾಳ್ವೆಗಾಗಿ ಸಮತೋಲನ ಕಾಯ್ದುಕೊಳ್ಳಬೇಕು" ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ 1960ರ ಅಡಿಯಲ್ಲಿ ರೂಪಿಸಲಾದ ಪ್ರಾಣಿ ಜನನ ನಿಯಂತ್ರಣ ನಿಯಮಾವಳಿ, 2023ನ್ನು ಜಾರಿಗೊಳಿಸುವಂತೆ ಕೋರಿ ಕಾನೂನು ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯೂ ಸೇರಿದಂತೆ, ಬೀದಿ ನಾಯಿ ಕಡಿತದ ಘಟನೆಗಳಿಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ನ್ಯಾಯಾಲಯ ಆಲಿಸಿತು.

ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 19, 2025ರಂದು ನಡೆಯಲಿದೆ. ಹಿರಿಯ ವಕೀಲ ದೀಪಕ್ ಪಿ ಅವರನ್ನು ನ್ಯಾಯಾಲಯಕ್ಕೆ ಸಹಾಯ ಮಾಡುವ ಅಮಿಕಸ್ ಕ್ಯೂರಿಯಾಗಿ ನೇಮಿಸಲಾಗಿದೆ.

[ಆದೇಶದ ಪ್ರತಿ]

Keerthana_Sarin_v_State_of_Kerala___ors_and_connected_cases.pdf
Preview