shree padmanabha swamy
shree padmanabha swamy  templetransindiatravels.com
ಸುದ್ದಿಗಳು

ಪದ್ಮನಾಭ ದೇಗುಲಕ್ಕೆ ಬಾಕಿ ಇರುವ ವರ್ಷಾಶನ ಪಾವತಿಸುವಂತೆ ಅರ್ಜಿ: ರಾಜ್ಯದ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್

Bar & Bench

ಕೇರಳ ರಾಜಧಾನಿ ತಿರುವನಂತಪುರದಲ್ಲಿರುವ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಆಸ್ತಿಗಳಿಗೆ ಸಂಬಂಧಿಸಿದಂತೆ 2017ರಿಂದ ಬಾಕಿ ಉಳಿಸಿಕೊಂಡಿರುವ ವರ್ಷಾಶನವ ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದ್ದು ಈ ಸಂಬಂಧ ಕೇರಳ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ (ಶಿಲ್ಪಾ ನಾಯರ್‌ ಮತ್ತು ಕೇರಳ ಸರ್ಕಾರ ಹಾಗೂ ಮತ್ತಿತರರ ನಡುವಣ ಪ್ರಕರಣ).

ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ ಜಿ ಅಜಿತ್‌ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮೂರು ವಾರಗಳಲ್ಲಿ ಪ್ರತಿ- ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.

ಪೀಪಲ್ ಫಾರ್ ಧರ್ಮ ಎಂಬ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷೆಯೂ ಆಗಿರುವ ದೇವಸ್ಥಾನ ಕಾರ್ಯಕರ್ತೆ ಶಿಲ್ಪಾ ನಾಯರ್ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಕೋರ್ಟ್ ಈ ಆದೇಶ ನೀಡಿದೆ.

ಅರ್ಜಿದಾರರ ಪ್ರಕಾರ, 1963ರ ಕೇರಳ ಭೂಸುಧಾರಣಾ ಕಾಯಿದೆ ಜಾರಿಗೆ ಬಂದ ನಂತರ, ಶಾಶ್ವತ ವರ್ಷಾಶನ ನೀಡುವ ಭರವಸೆಯೊಂದಿಗೆ 2,00,000 ಎಕರೆಗೂ ಹೆಚ್ಚು ದೇವಾಲಯ ಭೂಮಿಯನ್ನು ಕೇರಳ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಈ ವರ್ಶಾಶನ ದೇಗುಲದ ಉಸ್ತುವಾರಿ ಮತ್ತು ನಿರ್ವಹಣೆಗೆ ಅವಶ್ಯಕವಾಗಿದೆ. ದೇವಾಲಯಗಳ ಕಾಯಿದೆಯ ಸೆಕ್ಷನ್ 65 ಮತ್ತು 67ರಲ್ಲಿ ಕೂಡ ಇದನ್ನೇ ಹೇಳಲಾಗಿದೆ.

ಕಾಯ್ದೆಯ ಸೆಕ್ಷನ್ 65 ನಿರ್ದಿಷ್ಟವಾಗಿ ಸರ್ಕಾರದ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಖರೀದಿ ಬೆಲೆ ಪಾವತಿಸದಿದ್ದಲ್ಲಿ, ಸರ್ಕಾರದಿಂದ ಶಾಶ್ವತವಾಗಿ ವರ್ಷಾಶನ ಪಡೆಯಲು ಸಂಸ್ಥೆ ಅರ್ಹವಾಗಿರುತ್ತದೆ ಎಂದು ಅರ್ಜಿದಾರರು ವಾದಿಸಿದರು.

ಕೃಷಿ ಸುಧಾರಣೆಯ ಉದ್ದೇಶಿತ ಗುರಿಯೊಂದಿಗೆ 1971ರ ಶ್ರೀ ಪಾಂಡರವಾಕ ಭೂ (ಹಕ್ಕು ಮತ್ತು ಹಕ್ಕುಪತ್ರ) ಕಾಯಿದೆಯ ಮೂಲಕ ಭೂಮಿಯನ್ನು ಸರ್ಕಾರಕ್ಕೆ ನೀಡಲಾಯಿತು. 1971ರಲ್ಲಿ ಬಾಡಿಗೆ ತಪ್ಪಿಹೋದದ್ದಕ್ಕೆ ಪರಿಹಾರವಾಗಿ ₹ 58,500 ವರ್ಷಾಶನ ನೀಡುವುದಾಗಿ ಸರ್ಕಾರ ಹೇಳಿದ್ದನ್ನು ಒಪ್ಪಲಾಯಿತು. ಆದರೆ, ಅಂದಿನಿಂದ ಈ ಮೊತ್ತವನ್ನು ಪರಿಷ್ಕರಿಸಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
ಹೀಗಾಗಿ ಅರ್ಜಿದಾರರು ಈಗಿನ ಮಾರುಕಟ್ಟೆ ದರದಲ್ಲಿ ದೇವಾಲಯಕ್ಕೆ ನೀಡಬೇಕಾದ ವಾರ್ಷಿಕ ಬಾಡಿಗೆ ಪರಿಹಾರ ಪರಿಷ್ಕರಿಸುವಂತೆ ರಾಜ್ಯ ಸರ್ಕಾರದ ಮೊರೆ ಹೋದರು.

ಪರಿಷ್ಕೃತ ಬಾಡಿಗೆ ಪರಿಹಾರ ಮೊತ್ತವಾಗಿ ಪ್ರತಿ ಎಕರೆಗೆ ವಾರ್ಷಿಕ ₹ 25000 ನಾಮಮಾತ್ರದ ಬಾಡಿಗೆಯನ್ನು ನಿಗದಿಪಡಿಸಿದರೆ ವಾರ್ಷಿಕ ₹ 31.58 ಕೋಟಿಗಳಷ್ಟಾಗುತ್ತದೆ. ಹೆಚ್ಚುವರಿಯಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಶೇ 25ರಷ್ಟು ಅಧಿಕ ಪರಿಷ್ಕರಣಾ ಮೊತ್ತ ನೀಡಬೇಕೆಂದು ಕೂಡ ಮನವಿದಾರರು ಕೋರಿದ್ದಾರೆ.

ಪ್ರಸ್ತುತ ಯಾವುದೇ ಕೃಷಿ ಉದ್ದೇಶಗಳಿಗೆ ಬಳಕೆಯಾಗದ ಭೂಮಿಯನ್ನು ಮರಳಿ ನೀಡುವ ಸಾಧ್ಯತೆಯನ್ನು ಅನ್ವೇಷಿಸಲು ರಾಜ್ಯ ಸರ್ಕಾರವನ್ನು ಅರ್ಜಿದಾರರು ಒತ್ತಾಯಿಸಿದ್ದರು. ಆದರೆ ಸರ್ಕಾರ ಪ್ರತಿಕ್ರಿಯೆ ನೀಡದ ಕಾರಣಕ್ಕಾಗಿ ಅರ್ಜಿದಾರರು ವಕೀಲರಾದ ಜೆ ಸಾಯಿ ದೀಪಕ್ ಮತ್ತು ಸುವಿದತ್ತು ಸುಂದರಂ ಅವರ ಮೂಲಕ ಹೈಕೋರ್ಟ್‌ಗೆ ಮೊರೆ ಹೋದರು.

"ಸರ್ಕಾರವು ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾಗಿದ್ದು, ಅದು ಪರಿಹಾರ ಮತ್ತು ವರ್ಷಾಶನ ಪಾವತಿಸದೆ ಸಂವಿಧಾನದ 25 (1) ಮತ್ತು 26ನೇ ವಿಧಿಯಡಿ ನಾಗರಿಕರ ಮತ್ತು ದೇವಾಲಯ ಆಡಳಿತದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ. ಇದರಿಂದಾಗಿ ಹಣದ ಕೊರತೆ ಎದುರಾಗಿ ದೇವಾಲಯ ನಡೆಸಲು ಉಂಟಾದ ಅನಿವಾರ್ಯ ಅಸಮರ್ಥತೆ ಎದುರಾಗಿದೆ” ಎಂದು ಮನವಿಯಲ್ಲಿ ಹೇಳಲಾಗಿದೆ. ಮೂರು ವಾರಗಳ ಬಳಿಕ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದ್ದು ಅಷ್ಟರೊಳಗೆ ರಾಜ್ಯ ಸರ್ಕಾರ ತನ್ನ ಪ್ರತಿಕ್ರಿಯೆ ಸಲ್ಲಿಸಬೇಕಿದೆ.