Justice AK Jayasankaran Nambiar, Justice Mohammed Nias CP and Kerala High Court  
ಸುದ್ದಿಗಳು

ಪ್ರಚೋದನಕಾರಿ ಉಡುಗೆ ತೀರ್ಪು: ನ್ಯಾಯಾಧೀಶರ ವರ್ಗಾವಣೆ ಆದೇಶ ರದ್ದುಗೊಳಿಸಿದ ಕೇರಳ ಹೈಕೋರ್ಟ್

ಸಂತ್ರಸ್ತೆ ಪ್ರಚೋದನಕಾರಿ ಉಡುಗೆ ಧರಿಸಿದ್ದರೆ ಆ ಪ್ರಕರಣ ಮೇಲ್ನೋಟಕ್ಕೆ ನಿಲ್ಲುವುದಿಲ್ಲ ಎಂಬ ವಿವಾದಾತ್ಮಕ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೃಷ್ಣಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.

Bar & Bench

ವಿವಾದಾತ್ಮಕ ʼಪ್ರಚೋದನಕಾರಿ ಉಡುಗೆʼ ತೀರ್ಪು ನೀಡಿದ್ದ ಕೋರಿಕ್ಕೋಡ್‌ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌ ಕೃಷ್ಣಕುಮಾರ್‌ ಅವರ ವರ್ಗಾವಣೆ ಆದೇಶವನ್ನು ಕೇರಳ ಹೈಕೋರ್ಟ್‌ ಮಂಗಳವಾರ ರದ್ದುಗೊಳಿಸಿತು.

ತನ್ನ ವರ್ಗಾವಣೆ ಎತ್ತಿ ಹಿಡಿದಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ನ್ಯಾ. ಕೃಷ್ಣಕುಮಾರ್‌ ಅವರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಮೊಹಮ್ಮದ್ ನಿಯಾಸ್ ಸಿ ಪಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.

ಕೋರಿಕ್ಕೋಡ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ನ್ಯಾ. ಕೃಷ್ಣಕುಮಾರ್‌ ಅವರನ್ನು ಕೊಲ್ಲಂ ಜಿಲ್ಲೆಯ ಕಾರ್ಮಿಕ ನ್ಯಾಯಾಲಯದ ಮುಖ್ಯ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.

ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಹೋರಾಟಗಾರ ಲೇಖಕ ಸಿವಿಕ್‌ ಚಂದ್ರನ್‌ ಅವರಿಗೆ ಜಾಮೀನು ನೀಡುವ ವೇಳೆ ಸಂತ್ರಸ್ತೆ ಪ್ರಚೋದನಕಾರಿ ಉಡುಗೆ ಧರಿಸಿದ್ದರೆ ಆ ಪ್ರಕರಣ ಮೇಲ್ನೋಟಕ್ಕೆ ನಿಲ್ಲುವುದಿಲ್ಲ ಎಂದು ತೀರ್ಪು ನೀಡಿ ವಿವಾದಕ್ಕೊಳಗಾದ ಬಳಿಕ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಬಳಿಕ ತೀರ್ಪಿನಲ್ಲಿದ್ದ ಈ ಹೇಳಿಕೆಗಳನ್ನು ಕೈಬಿಟ್ಟ ಹೈಕೋರ್ಟ್‌ನ ಆಡಳಿತ ವಿಭಾಗ ಅವರನ್ನು ವರ್ಗಾವಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ನ್ಯಾ. ಕೃಷ್ಣಕುಮಾರ್‌ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಈಗಿನ ಮನವಿ ಸಲ್ಲಿಸಿದ್ದರು.  ವರ್ಗಾವಣೆ ಆದೇಶವು ಕಾನೂನುಬಾಹಿರವಾಗಿದ್ದು, ಮನಸೋ ಇಚ್ಛೆಯಿಂದ ಕೂಡಿದೆ. ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಕೃಷ್ಣಕುಮಾರ್ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ವಾದಿಸಿದ್ದರು. ನ್ಯಾಯಾಧೀಶರು ತಮ್ಮ ಕರ್ತವ್ಯ ನಿರ್ವಹಿಸುವಾಗ ನೀಡಿದ ತಪ್ಪು ಆದೇಶಕ್ಕಾಗಿ ಅವರನ್ನು ವರ್ಗಾವಣೆ ಮಾಡುವಂತಾಗಬಾರದು ಎಂದು ಅವರು ಕೋರಿದ್ದರು.

ಆದರೆ ಮನವಿಗೆ ವಿರೋಧ ವ್ಯಕ್ತಪಡಿಸಿದ್ದ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರು ಶಿಕ್ಷೆಯ ಕ್ರಮವಾಗಿ ವರ್ಗಾವಣೆ ಮಾಡಿಲ್ಲ ಬದಲಿಗೆ  ಸೇವೆಯ ಅಗತ್ಯ ಮತ್ತು ನ್ಯಾಯದಾನ ನೆರವೇರಿಸುವ ಸಾಮಾನ್ಯ ಹಿತಾಸಕ್ತಿಯ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ವಾದಿಸಿದ್ದರು.

ಅಲ್ಲದೆ ವಿವಾದಿತ ʼಪ್ರಚೋದನಕಾರಿ ಉಡುಗೆʼ ಬಗೆಗಿನ ಅನಗತ್ಯ ಅವಲೋಕನ ಮಾತ್ರವಲ್ಲದೆ ನ್ಯಾಯಾಧೀಶ ಎಸ್‌ ಕೃಷ್ಣಕುಮಾರ್‌,  ಆರೋಪಿಗಳಿಗೆ ವಿಚಾರಣೆಯ ದಿನಾಂಕವನ್ನು ವಾಟ್ಸಾಪ್‌ ಮಾಡಿ ಬಳಿಕ ಪ್ರಕರಣವನ್ನು ವಿಲೇವಾರಿ ಮಾಡಿದ್ದರು ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದರು.