ಮಲಯಾಳಂ ಚಿತ್ರ ಎಂಪುರಾನ್: ಎಲ್2 ಅನ್ನು ತಕ್ಷಣ ನಿಷೇಧಿಸುವಂತೆ ಕೋರಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ವಿ ವಿ ವಿಜೀಶ್ ಸಲ್ಲಿಸಿದ್ದ ಅರ್ಜಿ ಸಂಬಂಧ ಯಾವುದೇ ಮಧ್ಯಂತರ ಪರಿಹಾರ ನೀಡಲು ಕೇರಳ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ನ್ಯಾಯಮೂರ್ತಿ ಸಿ ಎಸ್ ಡಯಾಸ್ ಅವರು ಅರ್ಜಿದಾರರ ಪ್ರಾಮಾಣಿಕತೆಯನ್ನು ಅನುಮಾನಿಸಿ, ಈ ಅರ್ಜಿಯು ಪ್ರಚಾರದ ಉದ್ದೇಶದಿಂದ ಸಲ್ಲಿಕೆಯಾಗಿರುವಂತೆ ತೋರುತ್ತಿದೆ ಎಂದು ಹೇಳಿದರು.
ವಿಚಾರಣೆಯ ವೇಳೆ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, "ನೀವು ಈ ಎಂಪುರಾನ್ ಚಿತ್ರವನ್ನು ನೋಡಿದ್ದೀರಾ? ನಿಮ್ಮ ಆಕ್ಷೇಪಣೆ ಏನು? ಅದನ್ನು ಸೆನ್ಸಾರ್ ಮಂಡಳಿ ಪ್ರಮಾಣೀಕರಿಸಿದೆ ಅಲ್ಲವೇ?... ನಿಮ್ಮ ಪ್ರಾಮಾಣಿಕತೆಯ ಬಗ್ಗೆ ನನಗೆ ಅನುಮಾನವಿದೆ. ಈ ಚಿತ್ರದಿಂದಾಗಿ ಹಿಂಸಾಚಾರಕ್ಕೆ ಪ್ರಚೋದನೆ ಉಂಟಾಗಿದೆ ಎನ್ನುವುದಕ್ಕೆ ಒಂದೇ ಒಂದು ಉದಾಹರಣೆ ಕೊಡಿ. ಪೊಲೀಸರು ಎಫ್‌ಐಆರ್ ದಾಖಲಿಸಿದ್ದರೆ ಅದನ್ನು ನನಗೆ ತೋರಿಸಿ. ಇವೆಲ್ಲವೂ ಪ್ರಚಾರದ ಉದ್ದೇಶದ ಅರ್ಜಿಗಳು, ಬೇರೇನೂ ಅಲ್ಲ" ಎಂದು ಕಠಿಣವಾಗಿ ನುಡಿಯಿತು.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಈಗಾಗಲೇ ಚಲನಚಿತ್ರವನ್ನು ಪ್ರದರ್ಶನಕ್ಕೆ ಅನುಮತಿಸಿದೆ ಎಂಬ ರಾಜ್ಯದ ಪರ ವಕೀಲರ ವಾದವನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿತು. ಮೇಲಿನ ಹಿನ್ನೆಲೆಯಲ್ಲಿ, ಈ ವಿಷಯವನ್ನು ಆದ್ಯತೆಯ ಮೇಲೆ ಪಟ್ಟಿ ಮಾಡಲು ನ್ಯಾಯಾಲಯ ನಿರಾಕರಿಸಿತು. ಅಲ್ಲದೆ,ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲು ನಿರಾಕರಿಸಿತು.
ನ್ಯಾಯಾಲಯದ ಬೇಸಿಗೆ ರಜೆಯ ನಂತರ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸೂಚಿಸಿತು.
ಲೂಸಿಫರ್ ಚಿತ್ರದ ಮುಂದುವರಿದ ಭಾಗವಾದ ಎಂಪುರಾನ್ ಚಿತ್ರದಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ಗಲಭೆಗಳನ್ನು ಹೋಲುವ ದೃಶ್ಯಗಳಿವೆ. ಅಲ್ಲದೆ, ಚಿತ್ರದ ಖಳನಾಯಕ ಹಾಗೂ ಗಲಭೆಗಳಿಗೆ ಸಂಬಂಧಿಸಿದ ಬಜರಂಗದಳದ ನಾಯಕರೊಬ್ಬರ ನಡುವೆ ಹೋಲಿಕೆಗಳಿವೆ ಎನ್ನುವ ಚರ್ಚೆಗಳು ವಿವಾದವನ್ನು ಹುಟ್ಟುಹಾಕಿದ್ದವು. ಹಿಂದೂ ಬಲಪಂಥೀಯ ಸಂಘಟನೆಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದವು.