Rahul Gandhi and Kerala HC  Facebook
ಸುದ್ದಿಗಳು

ಸಂಸದರ ಕಚೇರಿ ಧ್ವಂಸ ಪ್ರಕರಣ: ರಾಹುಲ್‌ರ ನಾಲ್ವರು ಆಪ್ತ ಸಹಾಯಕರ ವಿರುದ್ಧದ ಪ್ರಕರಣಕ್ಕೆ ಕೇರಳ ಹೈಕೋರ್ಟ್‌ ತಡೆ

Bar & Bench

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ವಯನಾಡ್‌ ಕಚೇರಿಯಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಅವರ ನಾಲ್ವರು ಆಪ್ತ ಸಹಾಯಕರ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಕೇರಳ ಹೈಕೋರ್ಟ್‌ ಗುರುವಾರ ತಡೆಯಾಜ್ಞೆ ನೀಡಿದೆ [ರತೀಶ್‌ ಕುಮಾರ್‌ ಕೆ ಎಆರ್‌ ಮತ್ತು ಇತರರು ವರ್ಸಸ್‌ ಕೇರಳ ರಾಜ್ಯ ಮತ್ತು ಇತರರು].

ಆರೋಪಿಗಳಾದ ರತೀಶ್‌ ಕುಮಾರ್‌ ಕೆ ಆರ್‌, ಮುಜೀಬ್‌ ಕೆ ಎ, ರಾಹುಲ್‌ ಸುಜಾತಾ ರವೀಂದ್ರನ್‌ ಮತ್ತು ನೌಷಾದ್‌ ವಿ ಅವರ ವಿರುದ್ಧ ಕಲ್ಪೆಟ್ಟಾದ ಪ್ರಧಾನ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆ ವಜಾ ಮಾಡುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜ ವಿಜಯರಾಘವನ್‌ ವಿ ಅವರ ನೇತೃತ್ವದ ಏಕಸದಸ್ಯ ಪೀಠವು ಮಧ್ಯಂತರ ತಡೆಯಾಜ್ಞೆ ಆದೇಶ ಮಾಡಿದೆ.

ರಾಹುಲ್‌ ಗಾಂಧಿ ಕಚೇರಿಯ ವಿರುದ್ಧ ಆಡಳಿತರೂಢ ಸಿಪಿಐ (ಎಂ) ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾವು 2022ರ ಜುಲೈ 24ರಂದು ನಡೆಸಿದ ಪ್ರತಿಭಟನೆಯು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರು ರಾಹುಲ್‌ ಗಾಂಧಿ ಅವರ ಕಚೇರಿ ಪ್ರವೇಶಿಸಿ ಪೀಠೋಪಕರಣ ಮತ್ತಿತರ ವಸ್ತುಗಳನ್ನು ಧ್ವಂಸಗೊಳಿಸಿದ್ದರು ಎಂದು ವರದಿಯಾಗಿತ್ತು. ಇದರ ಭಾಗವಾಗಿ 2022ರ ಜುಲೈ 24ರಂದು ಎಸ್‌ಎಫ್‌ಐ ಜೊತೆ ಸಂಪರ್ಕ ಹೊಂದಿರುವ ಕೆಲವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ರಾಹುಲ್‌ ಗಾಂಧಿ ಕಚೇರಿಯಲ್ಲಿ ಅಳವಡಿಸಿದ್ದ ಮಹಾತ್ಮ ಗಾಂಧಿ ಅವರ ಭಾವಚಿತ್ರ ವಿರೂಪಗೊಳಿಸಿದ ಆರೋಪದ ಮೇಲೆ ಅನಾಮಿಕರ ವಿರುದ್ಧ ಐಪಿಸಿ ಸೆಕ್ಷನ್‌ 153ರ (ದಂಗೆಗೆ ಪ್ರಚೋದನೆ ನೀಡುವುದು) ಅಡಿ ಆನಂತರ ಮತ್ತೊಂದು ಪ್ರಕರಣ ದಾಖಲಿಸಲಾಗಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು ಈ ಎರಡನೇ ಪ್ರಕರಣವು ಮೊದಲನೇ ಪ್ರಕರಣಕ್ಕೆ ಪ್ರತಿಯಾಗಿ ದಾಖಲಿಸಿದ್ದಾಗಿದೆ. ಇದರಲ್ಲಿ ರಾಹುಲ್‌ ಗಾಂಧಿ ಅವರ ಆಪ್ತ ಸಹಾಯಕರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ರಾಹುಲ್‌ ಅವರ ಆಪ್ತ ಸಹಾಯಕರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷಿಯಿಲ್ಲ ಮತ್ತು ಯಾವೊಬ್ಬ ಸಾಕ್ಷಿಯೂ ಅರ್ಜಿದಾರರತ್ತ ಬೆರಳು ಮಾಡಿಲ್ಲ ಎಂದು ವಾದಿಸಿದರು. ಇದನ್ನು ಆಲಿಸಿದ ಪೀಠವು ಅರ್ಜಿದಾರರ ವಿರುದ್ಧದ ವಿಚಾರಣೆಗೆ ತಡೆ ನೀಡಿದೆ.