ತನ್ನ ದಾವೆ ನಿರ್ವಹಣಾ ವ್ಯವಸ್ಥೆಗೆ ಉಚಿತ ಸಂದೇಶ ಅಪ್ಲಿಕೇಷನ್ ಆಗಿರುವ ವಾಟ್ಸಾಪ್ ಸೇರ್ಪಡೆ ಮಾಡುವ ಮೂಲಕ ವಕೀಲರು ಮತ್ತು ದಾವೆದಾರರಿಗೆ ತಾನು ಒದಗಿಸುತ್ತಿರುವ ಸಂದೇಶ ಸೇವೆಯನ್ನು ಮೇಲ್ದರ್ಜೆಗೇರಿಸಲು ಕೇರಳ ಹೈಕೋರ್ಟ್ ನಿರ್ಧರಿಸಿದೆ.
ಹೊಸ ಸಂದೇಶ ಸೇವೆಯು ಅಕ್ಟೋಬರ್ 6, 2025ರಿಂದ ಆರಂಭವಾಗುತ್ತದೆ. ಇ-ಫೈಲಿಂಗ್ ದೋಷ, ಪ್ರಕರಣ ಪಟ್ಟಿ ವಿವರ, ವಿಚಾರಣೆ ಮತ್ತಿತರ ನವೀಕರಣಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ವಕೀಲರು, ದಾವೆ ಹೂಡುವವರು ಮತ್ತು ಪಕ್ಷಕಾರರಿಗೆ ವಾಟ್ಸಾಪ್ ಮೂಲಕ ನೇರವಾಗಿ ತಿಳಿಸಲಾಗುತ್ತದೆ. ಸೇವೆಗಳನ್ನು ಹಂತ ಹಂತವಾಗಿ ಸಕ್ರಿಯಗೊಳಿಸಲಾಗುತ್ತದೆ. ಸೇವೆ ಕೇವಲ ಹೆಚ್ಚುವರಿ ಸಂವಹನ ವಿಧಾನವಾಗಿದ್ದು ಇದನ್ನು ಬಳಸಿ ನೋಟಿಸ್, ಸಮನ್ಸ್ ಇತ್ಯಾದಿ ನೀಡುವುದಿಲ್ಲ ಎಂದು ನ್ಯಾಯಾಲಯದ ನೋಟಿಸ್ ಸ್ಪಷ್ಟಪಡಿಸಿದೆ.
ವಕೀಲರು ಮತ್ತು ದಾವೆದಾರರು ವಾಟ್ಸಾಪ್ ಸಂದೇಶ ತಡವಾಗಿ ಬಂದಿದೆ ಎಂದು ಅಥವಾ ರವಾನೆಯಾಗಿಲ್ಲ ಎಂದು ನ್ಯಾಯಾಲಯಕ್ಕೆ ಹಾಜರಾಗುವಂತಿಲ್ಲ. ಎಲ್ಲಾ ಮಾಹಿತಿಯನ್ನು ಅಧಿಕೃತ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬೇಕು ಎಂದು ಅದು ಎಚ್ಚರಿಕೆ ನೀಡಿದೆ.
ಕೇರಳ ಹೈಕೋರ್ಟ್‌ನ ಎಲ್ಲಾ ಅಧಿಕೃತ ಸಂದೇಶಗಳನ್ನು “The High Court of Kerala” ಎಂಬ ಪರಿಶೀಲಿತ ಖಾತೆಯಿಂದಷ್ಟೇ ಕಳುಹಿಸಲಾಗುತ್ತದೆ. ವಾಟ್ಸ್ಆಪ್ ಸಂದೇಶ ಸೇವೆ ಪ್ರಾಥಮಿಕ ಮತ್ತು ದ್ವಿತೀಯ ಮೊಬೈಲ್ ಸಂಖ್ಯೆಗಳಲ್ಲಿಯೂ ಲಭ್ಯ ಇರುತ್ತದೆ.
ಈಗಾಗಲೇ ಅಸ್ತಿತ್ವದಲ್ಲಿರುವ ಕಾರ್ಯವಿಧಾನದಂತೆ, ಪ್ರಾಥಮಿಕ ಸಂಖ್ಯೆಯನ್ನು ಹೈಕೋರ್ಟ್ ಸಿಎಂಎಸ್‌ನಲ್ಲಿ ಬದಲಿಸಲು (https://ecourt.keralacourts.in/digicourt/) ವಕೀಲರು ಮತ್ತು ದಾವೆದಾರರು ಇಮೇಲ್ ಮೂಲಕ ವಿನಂತಿ ಸಲ್ಲಿಸಬಹುದು. ದ್ವಿತೀಯ ಸಂಖ್ಯೆಯನ್ನು ವಕೀಲರ ಪೋರ್ಟಲ್ ಮೂಲಕ ನೇರವಾಗಿ ಅಪ್ಡೇಟ್ ಮಾಡಬಹುದು.