ಕೇರಳ ಹೈಕೋರ್ಟ್‌ ಮತ್ತು ತೃತೀಯ ಲಿಂಗಿ ಸಮುದಾಯದ ಧ್ವಜ 
ಸುದ್ದಿಗಳು

ತೃತೀಯ ಲಿಂಗಿ ವ್ಯಕ್ತಿ ಎನ್‌ಸಿಸಿ ಸೇರ್ಪಡೆಗೆ ಕೇರಳ ಹೈಕೋರ್ಟ್‌ ಅನುಮತಿ: ಕಾಯಿದೆ ತಿದ್ದುಪಡಿ ಆದೇಶಕ್ಕೆ ನಕಾರ

ಆದರೆ, ಎನ್‌ಸಿಸಿಯಲ್ಲಿ ತೃತೀಯ ಲಿಂಗಿ ಅಭ್ಯರ್ಥಿಗಳ ಪ್ರವೇಶಕ್ಕೆ ಅನುವು ಮಾಡಿಕೊಡಲು ಎನ್‌ಸಿಸಿ ಕಾಯಿದೆಯ ಸೆಕ್ಷನ್ 6ನ್ನು ಬದಲಿಸಲು ಕೇಂದ್ರ ಸರ್ಕಾರ ಶೀಘ್ರವೇ ಮುಂದಾಗುವ ವಿಶ್ವಾಸವಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ತೃತೀಯ ಲಿಂಗಿ ವ್ಯಕ್ತಿಯೊಬ್ಬರಿಗೆ ಸ್ವಯಂ ಗ್ರಹೀತ ಲಿಂಗ ಅಸ್ಮಿತೆಗೆ ಅನುಗುಣವಾಗಿ ನ್ಯಾಷನಲ್‌ ಕೆಡೆಟ್‌ ಕಾರ್ಪ್ಸ್‌ನಲ್ಲಿ ಮಹಿಳಾ ಕೆಡೆಟ್‌ ಅಗಿ ನೋಂದಾಯಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದ ಏಕಸದಸ್ಯ ಪೀಠದ ಆದೇಶವನ್ನು ಕೇರಳ ಹೈಕೋರ್ಟ್‌ ಈಚೆಗೆ ಎತ್ತಿಹಿಡಿದಿದೆ.

ಎನ್‌ಸಿಸಿ ಕಾಯಿದೆ ಮಹಿಳೆಯರು ಎನ್‌ಸಿಸಿಗೆ ಸೇರ್ಪಡೆಯಾಗಲು ಅನುಮತಿಸುವುದರಿಂದ ಜೊತೆಗೆ ತೃತೀಯ ಲಿಂಗಿ ವ್ಯಕ್ತಿಗೆ ಸ್ತ್ರಿ ಲಿಂಗದ ಗುರುತಿನ ಚೀಟಿ ನೀಡಿರುವುದರಿಂದ ಅವರು ಎನ್‌ಸಿಸಿಗೆ ಸೇರ್ಪಡೆಯಾಗಲು ಅರ್ಹರು ಎಂದು ನ್ಯಾಯಮೂರ್ತಿಗಳಾದ ಅಮಿತ್ ರಾವಲ್ ಮತ್ತು ಸಿ ಎಸ್ ಸುಧಾ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ತೃತೀಯ ಲಿಂಗಿಗಗಳ ಕಾಯಿದೆಯ ಸೆಕ್ಷನ್‌ಗಳು ಮತ್ತು ನಾಲ್ಸಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಅನ್ವಯ ಅರ್ಜಿದಾರರಿಗೆ ಮಹಿಳೆ ಎಂಬ ಗುರುತಿನ ಚೀಟಿ ನೀಡಿರುವುದರಿಂದ ಅವರು ಎನ್‌ಸಿಸಿ ಕಾಯಿದೆಯ ಸೆಕ್ಷನ್ 6 (2) ರ ಅಡಿಯಲ್ಲಿ ಎನ್‌ಸಿಸಿಗೆ ನೋಂದಾಯಿಸಿಕೊಳ್ಳಲು ಖಂಡಿತವಾಗಿಯೂ ಅರ್ಹರು ಎಂದು ಅದು ನುಡಿದಿದೆ.

ನ್ಯಾಯಮೂರ್ತಿಗಳಾದ ಅಮಿತ್ ರಾವಲ್‌ ಮತ್ತು ಸಿ ಎಸ್ ಸುಧಾ

ಆದರೆ, ತೃತೀಯ ಲಿಂಗಿಗಳು ಎನ್‌ಸಿಸಿಗೆ ದಾಖಲಾಗಲು ಅನುವು ಮಾಡಿಕೊಡುವುದಕ್ಕೆ ಎನ್‌ಸಿಸಿ ಕಾಯಿದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದ ಏಕಸದಸ್ಯ ಪೀಠದ ಆದೇಶದ ಭಾಗವನ್ನು ಪೀಠ ಬದಿಗೆ ಸರಿಸಿತು.

ಕಾನೂನನ್ನು ತಿದ್ದುಪಡಿ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡುವ ಅಂತಹ ಆದೇಶವನ್ನು ನ್ಯಾಯಾಲಯ ಹೊರಡಿಸಲು ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ.

ಇದೇ ವೇಳೆ ಎನ್‌ಸಿಸಿಯಲ್ಲಿ ತೃತೀಯ ಲಿಂಗಿ ಅಭ್ಯರ್ಥಿಗಳ ಪ್ರವೇಶಕ್ಕೆ ಅನುವು ಮಾಡಿಕೊಡುವುದಕ್ಕಾಗಿ ಎನ್‌ಸಿಸಿ ಕಾಯಿದೆಯ ಸೆಕ್ಷನ್ 6ನ್ನು ಬದಲಿಸಲು ಕೇಂದ್ರ ಸರ್ಕಾರ ಶೀಘ್ರವೇ ಮುಂದಾಗುವ ವಿಶ್ವಾಸವಿದೆ ಎಂದು ನ್ಯಾಯಾಲಯ ಹೇಳಿದೆ.

ಲಿಂಗಾಧಾರಿತ ವೈದ್ಯಕೀಯ ಕಾರ್ಯವಿಧಾನಗಳಿಗೆ ಒಳಗಾಗಿ ತನ್ನ ಗುರುತಿನ ಚೀಟಿ ಪಡೆದು ಎನ್‌ಸಿಸಿಗೆ ಸೇರ್ಪಡೆಯಾಗಲು ತೃತೀಯ ಲಿಂಗಿ ವ್ಯಕ್ತಿ ಹೀನಾ ಹನೀಫಾ ಅವರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ʼಪುರುಷರು' ಅಥವಾ 'ಮಹಿಳೆಯರು' ಮಾತ್ರ ಎನ್‌ಸಿಸಿಯಲ್ಲಿ ಕೆಡೆಟ್‌ಗಳಾಗಿ ನೋಂದಾಯಿಸಿಕೊಳ್ಳಲು ಅನುಮತಿ ಇದ್ದು ತೃತೀಯ ಲಿಂಗಿ ವ್ಯಕ್ತಿಗಳಿಗೆ ಅಲ್ಲ ಎಂದು ಕಾಯಿದೆಯ ಸೆಕ್ಷನ್ 6 ಹೇಳುವುದರಿಂದ ಹೀನಾ ಅವರಿಗೆ ಅವಕಾಶ ನಿರಾಕರಿಸಲಾಗಿತ್ತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

National Cadet Corps v. Hina Haneefa & Ors..pdf
Preview