Kerala High Court
Kerala High Court 
ಸುದ್ದಿಗಳು

ಕೇರಳ ನರಬಲಿ ಪ್ರಕರಣ: ಪೊಲೀಸ್‌ ಕಸ್ಟಡಿಗೆ ನೀಡಿದ್ದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ ಮೂವರು ಆರೋಪಿಗಳು

Bar & Bench

ಕೇರಳದಲ್ಲಿ ನಡೆದಿರುವ ಕುಖ್ಯಾತ ನರ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅವರು 12 ದಿನ ಪೊಲೀಸ್‌ ಕಸ್ಟಡಿಗೆ ನೀಡಿರುವುದನ್ನು ಪ್ರಶ್ನಿಸಿ ಮೂವರು ಆರೋಪಿಗಳು ಕೇರಳ ಹೈಕೋರ್ಟ್‌ ಕದ ತಟ್ಟಿದ್ದಾರೆ.

ಅಕ್ಟೋಬರ್‌ 13ರಂದು ಮೊಹಮ್ಮದ್‌ ಶಫಿ, ಭಗವಾಲ್‌ ಸಿಂಗ್‌ ಮತ್ತು ಲೈಲಾ ಭಗವಾಲ್‌ ಸಿಂಗ್‌ ಅವರನ್ನು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಎಲ್ಡೋಸ್‌ ಮ್ಯಾಥ್ಯೂ ಅವರು ಪೊಲೀಸ್‌ ಕಸ್ಟಡಿಗೆ ನೀಡಿದ್ದರು. ಇದಕ್ಕೂ ಮುನ್ನ, ಅದೇ ನ್ಯಾಯಾಲಯವು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಆರೋಪಿಗಳ ಪೊಲೀಸ್‌ ಕಸ್ಟಡಿಯು ಅಕ್ಟೋಬರ್‌ 24ರಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಮೂವರು ಆರೋಪಿಗಳನ್ನು ವಕೀಲ ಬಿ ಎ ಆಲೂರ್‌ ಪ್ರತಿನಿಧಿಸಲಿದ್ದಾರೆ. ವಿಚಾರಣಾ ನ್ಯಾಯಾಲಯದ ಕಸ್ಟಡಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ.

ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳಾದಲ್ಲಿ ಇಬ್ಬರು ಮಹಿಳೆಯರ ದೇಹಗಳು ಪತ್ತೆಯಾದ ಬಳಿಕ ರಾಜ್ಯದಲ್ಲಿ ನರಬಲಿ ಪ್ರಕರಣ ಬೆಳಕಿಗೆ ಬಂದಿತ್ತು. ಇಬ್ಬರು ಮಹಿಳೆಯರ ನಾಪತ್ತೆಗೆ ಸಂಬಂಧಿಸಿದ ತನಿಖೆಯು ಪೊಲೀಸರನ್ನು ನರಬಲಿ ವ್ಯೂಹದೆಡೆಗೆ ಕೊಂಡೊಯ್ದಿತ್ತು.

ಎರ್ನಾಕುಲಂನಲ್ಲಿ ಲಾಟರಿ ಟಿಕೆಟ್‌ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರು ಇದೇ ಜೂನ್‌ ಮತ್ತು ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು. ಅವರಿಬ್ಬರ ಕುಟುಂಬವೂ ಕೇರಳದಲ್ಲಿದೆ. ಮಹಿಳೆಯ ಕೊಲೆಯನ್ನು ನರಬಲಿಯ ಭಾಗವಾಗಿ ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿತ್ತು.

ಅಪಹರಣ ಮತ್ತು ನರಬಲಿಗೆ ಸಂಬಂಧಿಸಿದಂತೆ ಪೊಲೀಸರು ರಶೀದ್‌ ಎಂಬಾತನನ್ನು ಬಂಧಿಸಿದ್ದರು. ನರಬಲಿಯಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ದಂಪತಿಯಾದ ಭಗವಾಲ್‌ ಸಿಂಗ್‌ ಮತ್ತು ಲೈಲಾ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಲೈಂಗಿಕ ಕೆಲಸದಲ್ಲಿ ತೊಡಗುವುದಕ್ಕೆ ಮತ್ತು ಲೈಂಗಿಕ ಚಿತ್ರಗಳಲ್ಲಿ ನಟಿಸುವುದಕ್ಕೆ ದೊಡ್ಡ ಮೊತ್ತ ನೀಡುವುದಾಗಿ ಶಫಿ ಮಹಿಳೆಯನ್ನು ಸೆಳೆಯುತ್ತಿದ್ದ ಎಂಬುದು ಪೊಲೀಸರ ಆರೋಪ. ನರಬಲಿ ನೀಡುವುದಕ್ಕಾಗಿ ಸಿಂಗ್‌ ಅವರನ್ನು ಶಫಿ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ್ದ. ಆನಂತರ ಮಹಿಳೆಯರನ್ನು ಸಿಂಗ್‌ ಮನೆಗೆ ಕರೆದೊಯ್ದು ಕ್ರೂರವಾಗಿ ಹತ್ಯೆ ಮಾಡಿ, ದೇಹವನ್ನು ಕೊಚ್ಚಿ ಅಂಗಳದಲ್ಲೇ ಹೂತು ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ.