ಸುದ್ದಿಗಳು

ʼಪ್ರಚೋದನಾಕಾರಿ ಉಡುಪುʼ ವಿವಾದಾತ್ಮಕ ಆದೇಶ ಹೊರಡಿಸಿದ್ದ ಕೇರಳ ನ್ಯಾಯಾಧೀಶರು ಕಾರ್ಮಿಕ ನ್ಯಾಯಾಲಯಕ್ಕೆ ವರ್ಗ

ಕೊರಿಕ್ಕೋಡ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಎಸ್‌ ಕೃಷ್ಣಕುಮಾರ್‌ ಅವರನ್ನು ಕೊಲ್ಲಂನ ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

Bar & Bench

ಸಂತ್ರಸೆಯು ಲೈಂಗಿಕವಾಗಿ ಪ್ರಚೋದನೆ ನೀಡುವಂಥ ಉಡುಪು ಧರಿಸಿದ್ದರೆ ಲೈಂಗಿಕ ಕಿರುಕುಳ ಪ್ರಕರಣ ಮೇಲ್ನೋಟಕ್ಕೆ ನಿಲ್ಲುವುದಿಲ್ಲ ಎಂಬ ವಿವಾದಾತ್ಮಕ ತೀರ್ಪು ಪ್ರಕಟಿಸಿದ್ದ ಕೊರಿಕ್ಕೋಡ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಎಸ್‌ ಕೃಷ್ಣಕುಮಾರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ನ್ಯಾಯಾಧೀಶ ಎಸ್‌ ಕೃಷ್ಣಕುಮಾರ್‌ ಅವರನ್ನು ಕೊಲ್ಲಂನ ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ ಎಂದು ಕೇರಳ ಹೈಕೋರ್ಟ್‌ನ ವೆಬ್‌ಸೈಟ್‌ನಲ್ಲಿ ನೋಟಿಸ್‌ ಪ್ರಕಟಿಸಲಾಗಿದೆ. ನಿಯಮಿತ ವರ್ಗಾವಣೆಯ ಭಾಗವಾಗಿ ಅವರನ್ನು ವರ್ಗ ಮಾಡಲಾಗಿದ್ದು, ನ್ಯಾ. ಕೃಷ್ಣಕುಮಾರ್‌ ಅವರಂತೆಯೇ ಇತರೆ ಮೂವರು ನ್ಯಾಯಾಧೀಶರನ್ನೂ ವರ್ಗಾವಣೆ ಮಾಡಲಾಗಿದೆ.

ನ್ಯಾ. ಕೃಷ್ಣಕುಮಾರ್‌ ಅವರು ನೀಡಿದ್ದ ಪ್ರಚೋದನಕಾರಿ ಉಡುಪಿನ ತೀರ್ಪಿಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತಲ್ಲದೇ, ನ್ಯಾಯಾಂಗ ಅಧಿಕಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಬೇಕು ಎಂದು ಕಾನೂನು ಕ್ಷೇತ್ರದಿಂದ ಆಗ್ರಹ ಕೇಳಿಬಂದಿತ್ತು.

ಭಾರತೀಯ ದಂಡ ಸಂಹಿತೆ ಸೆಕ್ಷನ್‌ 354ಎ ಅಡಿ ಅಪರಾಧವಾಗಬೇಕಾದರೆ ಅಸಮ್ಮತಿ ಲೈಂಗಿಕ ಬೇಡಿಕೆ ಇರಬೇಕು. ಕೀಳು ಅಭಿರುಚಿಯ ಲೈಂಗಿಕ ಹೇಳಿಕೆಗಳು ಇರಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಲಭ್ಯವಿರುವ ದೂರುದಾರೆಯ ಚಿತ್ರಗಳಲ್ಲಿ ಆಕೆ ಪ್ರಚೋದನಾಕಾರಿ ಉಡುಪು ಧರಿಸಿಕೊಂಡಿದ್ದಾರೆ ಎಂದಿದ್ದ ನ್ಯಾ. ಎಸ್‌ ಕೃಷ್ಣ ಕುಮಾರ್‌ ಅವರು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಸಿವಿಕ್‌ ಚಂದ್ರನ್‌ ಅವರಿಗೆ ಜಾಮೀನು ಮಂಜೂರು ಮಾಡಿದ್ದರು.

ಸಿವಿಕ್‌ ಚಂದ್ರನ್‌ ಅವರ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 354 ಎ(2) &341 ಮತ್ತು 354ರ ಪ್ರಕರಣ ದಾಖಲಿಸಲಾಗಿದೆ.

ಕಡಲ ವೀಡುವಿನ ನಂದಿ ಸಮುದ್ರ ತಟದಲ್ಲಿ ನೀಲಂದನಾಥಮ್‌ ಸಮೂಹವು 2020ರ ಫೆಬ್ರವರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ನಂತರ ಸಮುದ್ರ ತೀರದಲ್ಲಿ ವಿರಮಿಸುತ್ತಿದ್ದ ದೂರುದಾರೆಯನ್ನು ಆರೋಪಿಯು ಬಲವಂತವಾಗಿ ಅಪ್ಪಿಗೊಂಡು, ತನ್ನ ತೊಡೆಯ ಮೇಲೆ ಕುಳಿತುಕೊಳ್ಳುವಂತೆ ಆಗ್ರಹಿಸಿದ್ದರು. ಇಷ್ಟುಮಾತ್ರವಲ್ಲದೇ, ಆರೋಪಿಯು ಸಂತ್ರಸ್ತೆಯ ಸ್ತನಗಳನ್ನು ಸ್ಪರ್ಶಿಸಿದ್ದರು ಆ ಮೂಲಕ ಆಕೆಯ ಘನತೆಗೆ ಚ್ಯುತಿ ಉಂಟು ಮಾಡಿದ್ದಾರೆ ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿದೆ.