ಸುದ್ದಿಗಳು

ಕೇವಲ ಒಂದು ಜಿಲ್ಲೆಯಲ್ಲಿ ಗಡಿ ಮುಚ್ಚುವುದು ಹಾಸ್ಯಾಸ್ಪದ: ಕರ್ನಾಟಕ ಹೈಕೋರ್ಟ್ ಕಿಡಿ

Bar & Bench

ಕೇರಳದ ಗಡಿಯಿಂದ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಈ ಹಿಂದಿನ ಆದೇಶವನ್ನು ಮಾರ್ಪಡಿಸಲು ವಿಫಲವಾದ ಕಾರಣ ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.

ಕೋವಿಡ್ -19 ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಕರ್ನಾಟಕ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಫೆಬ್ರವರಿ 18 ರಂದು ಹೊರಡಿಸಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ಬದಲಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠಕ್ಕೆ ತಿಳಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಚೆಕ್‌ಪೋಸ್ಟ್‌ಗಳನ್ನು ಹೊರತುಪಡಿಸಿ ಉಳಿದೆಡೆಗಳಿಂದ ಕಾಸರಗೋಡು ಮೂಲಕ ಪ್ರವೇಶಿಸುವವರಿಗೆ ನಿರ್ಬಂಧ ಹೇರಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.

ಸರ್ಕಾರದ ಈ ನಿಲುವನ್ನು ತೀವ್ರವಾಗಿ ಖಂಡಿಸಿದ ನ್ಯಾಯಾಲಯ "25 ಪ್ರವೇಶ ಕೇಂದ್ರಗಳಿವೆ. ನೀವು ನಿರ್ಬಂಧವನ್ನು ನಾಲ್ಕು ಪ್ರವೇಶ ಕೇಂದ್ರಗಳಿಗೆ ಸೀಮಿತಗೊಳಿಸುತ್ತಿದ್ದೀರಿ. ಯಾವ ಕಾನೂನಿನಡಿಯಲ್ಲಿ ಹೀಗೆ ಮಾಡುತ್ತಿದ್ದೀರಿ? ಕೇಂದ್ರ ಸರ್ಕಾರದ ಆದೇಶಗಳಿಗೆ ವಿರುದ್ಧವಾಗಿ ನೀವು ವರ್ತಿಸುತ್ತಿದ್ದೀರಿ" ಎಂದು ಅಸಮಾಧಾನ ವ್ಯಕ್ತಪಡಿಸಿತು.

2021 ರ ಮಾರ್ಚ್ 8 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ನಾಲ್ಕು ಕೇಂದ್ರಗಳನ್ನು ಹೊರತುಪಡಿಸಿ ಕೇರಳದ ಎಲ್ಲಾ ಪ್ರವೇಶ ಕೇಂದ್ರಗಳನ್ನು ಮುಚ್ಚುವ ಫೆಬ್ರವರಿ 18 ರ ಆದೇಶಕ್ಕೆ ಯಾವುದೇ ಮಾರ್ಪಾಡು ಮಾಡಲಾಗಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

"ಹೀಗಾಗಿ, ಯಾವುದೇ ವ್ಯಕ್ತಿ ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಬಯಸಿದರೆ, ರಾಜ್ಯ ಸರ್ಕಾರ ಹೊರಡಿಸಿದ ಫೆಬ್ರವರಿ 16 ರ ಸುತ್ತೋಲೆ ಬಳಿಕವೂ, ಫೆಬ್ರವರಿ 18 ರ ಆದೇಶದಲ್ಲಿ ಉಲ್ಲೇಖಿಸಲಾದ ನಾಲ್ಕು ಪ್ರವೇಶ ಕೇಂದ್ರಗಳ ಮೂಲಕ ಮಾತ್ರ ಕರ್ನಾಟಕವನ್ನು ಪ್ರವೇಶಿಸಬೇಕಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಫೆಬ್ರವರಿ 16, 2021 ರಂದು ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ಪ್ರವೇಶ ಕೇಂದ್ರಗಳನ್ನು ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

"25 ಪ್ರವೇಶ ಕೇಂದ್ರಗಳಿದ್ದು, ಜೇಬಿನಲ್ಲಿ ಆರ್‌ಟಿಪಿಸಿಆರ್ ಪ್ರಮಾಣಪತ್ರವಿದ್ದರೂ ಆ ವ್ಯಕ್ತಿ 50 ಕಿಲೋಮೀಟರ್ ಪ್ರಯಾಣಿಸಿದ ನಂತರ (ರಾಜ್ಯ) ಪ್ರವೇಶಿಸಿ ಎಂದು ಹೇಳುವಿರಾ?..." ಎಂಬುದಾಗಿ ಪ್ರಶ್ನಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರಿ ವಕೀಲರು ಕೇರಳದ ಅನೇಕ ಮಂದಿ ಶಿಕ್ಷಣ ಮತ್ತು ಉದ್ಯೋಗ ಮತ್ತಿತರ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಲ್ಲೆ ಪ್ರವೇಶಿಸುವ ಕಾರಣ ನಿರ್ಬಂಧ ವಿಧಿಸಲಾಗಿದೆ ಎಂದರು. ಆದರೆ ನ್ಯಾಯಾಲಯ "ಇದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಕೇರಳದ ಜನ ಕೇವಲ ಒಂದು ಜಿಲ್ಲೆಯ ಮೂಲಕ ಪ್ರವೇಶಿಸುವಂತಿಲ್ಲ ಆದರೆ ಉಳಿದ ಜಿಲ್ಲೆಗಳಿಂದ ಪ್ರವೇಶಿಸಬಹುದು" ಎಂದು ಕುಟುಕಿತು.

ಈ ಹಿಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರಸ್ತೆ ಮುಚ್ಚಲಾಗದು. ಬದಲಿಗೆ ಜನರ ತಪಾಸಣೆಗಾಗಿ ಮೂಲಸೌಕರ್ಯ ಒದಗಿಸಬೇಕು ಎಂದು ತಿಳಿಸಿತ್ತು. ಮಾರ್ಚ್ 18 ರಂದು ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.