ಕಾಡೆಮ್ಮೆ 
ಸುದ್ದಿಗಳು

ಮಾನವ-ವನ್ಯಜೀವಿ ಸಂಘರ್ಷ ತಡೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ ಶಾಸಕ

ಕೇರಳ ಮತ್ತು ತಮಿಳುನಾಡಿನಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ದಾಳಿಯಿಂದ ಮನುಷ್ಯರು ಸಾವನ್ನಪ್ಪಿರುವುದು ಈ ರಿಟ್ ಅರ್ಜಿ ಸಲ್ಲಿಸಲು ಕಾರಣ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Bar & Bench

ಕಾಡು ಪ್ರಾಣಿಗಳ ದಾಳಿಯಿಂದ ಕೇರಳದಲ್ಲಿ ಇತ್ತೀಚೆಗೆ ಸಾವು ನೋವಿನ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸುವಂತಹ ಯೋಜನೆ ರೂಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕೇರಳದ ಶಾಸಕ ಪಿ ವಿ ಅನ್ವರ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕೇರಳ ಮತ್ತು ತಮಿಳುನಾಡಿನಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ದಾಳಿಯಿಂದ ಮನುಷ್ಯರು ಸಾವನ್ನಪ್ಪಿರುವುದು ಈ ರಿಟ್ ಅರ್ಜಿ ಸಲ್ಲಿಸಲು ಕಾರಣ ಎಂದು ವಕೀಲ ಸುಭಾಷ್ ಚಂದ್ರನ್ ಕೆ ಆರ್ ಅವರ ಮೂಲಕ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಮಾಹಿತಿಯ ಪ್ರಕಾರ, 2018-2023ರ ಅವಧಿಯಲ್ಲಿ ಕಾಡು ಪ್ರಾಣಿಗಳಿಂದ 2,657 ಮಾನವರ ಸಾವು ನೋವು ಸಂಭವಿಸಿವೆ. ಇಂತಹ ಒಂದೊಂದು ಘಟನೆಯೂ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

  • ಮಾನವ- ವನ್ಯಜೀವಿ ಸಂಘರ್ಷ ತಪ್ಪಿಸಲು ಈಗಿರುವ ವನ್ಯಜೀವಿ ಸಂರಕ್ಷಣಾ ಕಾಯಿದೆಗಳಿಗೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕೆಂದು ಕೇರಳ ವಿಧಾನಸಭೆ ಕಳೆದ ವರ್ಷ ಫೆಬ್ರವರಿ 14 ರಂದು ಸರ್ವಾನುಮತದ ನಿರ್ಣಯ ಕೈಗೊಂಡಿದೆ.

  • ವಸತಿ ಪ್ರದೇಶಗಳಿಗೆ ದಾಳಿ ಮಾಡುವ ಮತ್ತು ಮನುಷ್ಯರ ಜೀವನಕ್ಕೆ ಕೂಡಲೇ ಕುತ್ತು ತರುವಂತಹ ಕಾಡು ಪ್ರಾಣಿಗಳನ್ನು ನಿರ್ಮೂಲನೆ ಮಾಡಲು ಕೇಂದ್ರ ಕಾನೂನು ಸಬಲೀಕರಣ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಬೇಕು.

  • ಮನುಷ್ಯರಿಗೆ ಕಂಟಕಪ್ರಾಯವಾಗಿರುವ ಕೆಲ ಕಾಡುಪ್ರಾಣಿಗಳನ್ನು ಕೊಲ್ಲಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕು.

  • ಮಾನವ-ವನ್ಯಜೀವಿ ಸಂಘರ್ಷ ತಜ್ಞರ ಸಲಹೆ ಪಡೆದು ರಾಷ್ಟ್ರೀಯ ನೀತಿ ರೂಪಿಸಬೇಕು.

  • ಪರಿಹಾರ ನಿಧಿ ಸ್ಥಾಪಿಸಬೇಕು.

  • ವನ್ಯಜೀವಿ ಸಂಘರ್ಷದಿಂದ ನಷ್ಟ ಅನುಭವಿಸುವ ಕಾಡಂಚಿನ ಬೆಳೆಗಾರರಿಗೆ ವಿಮೆ ಒದಗಿಸಬೇಕು.

  • ಅರಣ್ಯ ಪರಿಸರವನ್ನು ಮತ್ತೆ ಕಟ್ಟಿಕೊಡಬೇಕು. ಜಲಮೂಲ ಮತ್ತು ವನ್ಯಜೀವಿ ಕಾರಿಡಾರ್‌ಗಳನ್ನು ರಚಿಸಬೇಕು.

  • ಅಳಿವಿನಂಚಿನಲ್ಲಿರುವ ಪಶುಪಕ್ಷಿಗಳ ಅಭಿವೃದ್ಧಿ ಮತ್ತು ಸ್ಥಳಾಂತರ ಮಾಡಬೇಕು.

  • ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗದಂತೆ ಮಾರಕವಲ್ಲದ ಜನನ ನಿಯಂತ್ರಣ ವಿಧಾನಗಳನ್ನು ಬಳಸಬೇಕು.

  • ಪ್ರಾಣಿಗಳ ವಧೆಗೆ ನೀತಿ ರೂಪಿಸಬೇಕು.

  • ವಿದ್ಯುತ್ ಬೇಲಿ ಮತ್ತು ಡ್ರೋನ್‌ ರೀತಿಯ ತಂತ್ರಜ್ಞಾನ ಆಧಾರಿತ ಪರಿಹಾರ ಒದಗಿಸಬೇಕು.

  • ಅಲ್ಲದೆ ತ್ಯಾಜ್ಯ ನಿರ್ವಹಣೆ, ಶಿಕ್ಷಣ ಹಾಗೂ ಸಮುದಾಯ ಪಾಲ್ಗೊಳ್ಳುವಿಕೆಯಂತಹ ಪೂರ್ವಭಾವಿ ಕ್ರಮ ಕೈಗೊಳ್ಳಬೇಕು.