ಸುಪ್ರೀಂ ಕೋರ್ಟ್ ಮತ್ತು ಕೇರಳ 
ಸುದ್ದಿಗಳು

ಹಣಕಾಸು ವ್ಯವಹಾರದಲ್ಲಿ ಕೇಂದ್ರದ ಹಸ್ತಕ್ಷೇಪ; ಸಾಲ ಪಡೆಯುವ ಅಧಿಕಾರಕ್ಕೂ ಅಂಕುಶ: ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ

ಕೇಂದ್ರದೊಂದಿಗಿನ ಹಣಕಾಸಿನ ವಿವಾದಗಳಿಗೆ ಸಂಬಂಧಿಸಿದಂತೆ ಈ ವರ್ಷ ಸುಪ್ರೀಂ ಕಟಕಟೆ ಏರುತ್ತಿರುವ 2ನೇ ರಾಜ್ಯ ಕೇರಳ. ಕೇಂದ್ರದ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಗೆ ಹಾನಿಕಾರಕ ಎಂಬುದು ಕೇರಳದ ವಾದ.

Bar & Bench

ಸಾಲ ಪಡೆಯುವ ಮತ್ತು ನಿಯಂತ್ರಿಸುವ ರಾಜ್ಯದ ಅಧಿಕಾರದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಹಸ್ತಕ್ಷೇಪ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಕೇರಳ ಸರ್ಕಾರವು ಕೇಂದ್ರ ಸರ್ಕಾರವು ತನ್ನ ಕಾರ್ಯಾಂಗದ ಕ್ರಮಗಳ ಮೂಲಕ ರಾಜ್ಯದ ಬಜೆಟ್‌ ಪ್ರಕ್ರಿಯೆ ಮೇಲೆ ಹಿಡಿತ ಸಾಧಿಸಿದೆ ಎಂದು ಆರೋಪಿಸಿದೆ.

ಸಂವಿಧಾನದ 131ನೇ ವಿಧಿಯಡಿ ಅರ್ಜಿ ಸಲ್ಲಿಸಿರುವ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರ್ಕಾರದ ವಿಧಿಸಿರುವ ಸಾಲದ ಮಿತಿಯಿಂದಾಗಿ ಹಲವು ವರ್ಷಗಳಿಂದ ಪಾವತಿಯಾಗದ ಬಾಕಿಯ ಮೊತ್ತ ಬೆಳೆಯುತ್ತಿದ್ದು ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದಿದ್ದಾರೆ.

ಕೇರಳದ ಅಹವಾಲು

  • ಗಂಭೀರ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ತನಗೆ ತಕ್ಷಣ ಮತ್ತು ತುರ್ತಾಗಿ 26,226 ಕೋಟಿ ರೂಪಾಯಿ ಅಗತ್ಯವಿದೆ.

  • ಕೇಂದ್ರ ಸರ್ಕಾರ ನಿವ್ವಳ ಸಾಲದ ಮಿತಿ ವಿಧಿಸುವುದರಿಂದ ಮುಕ್ತ ಮಾರುಕಟ್ಟೆ ಸೇರಿದಂತೆ ಎಲ್ಲಾ ಮೂಲಗಳಿಂದ ಸಾಲ ಪಡೆಯುವುದಕ್ಕೆ ಕಡಿವಾಣ ಬೀಳಲಿದ್ದು ಇದರಿಂದ ರಾಜ್ಯದ ವಿಶೇಷ ಸಾಂವಿಧಾನಿಕ ಅಧಿಕಾರಗಳು ಮೊಟಕಾಗುತ್ತವೆ.

  • ತನ್ನ ಖಜಾನೆ ಕಾರ್ಯಾಚರಣೆಗಳು ಸ್ಥಗಿತಗೊಳುತ್ತವೆ ಇಲ್ಲವೇ ಸಂಪೂರ್ಣ ಮೊಟಕಾಗುತ್ತವೆ ಎಂಬ ನ್ಯಾಯಯುತ ಭೀತಿ ಎದುರಾಗಿದೆ. ಇದು ಮುಂದೆ ದುರಂತಮಯ ಪರಿಣಾಮಗಳಿಗೆ ಎಡೆ ಮಾಡಿಕೊಡಬಹುದು.

  • ಬಜೆಟ್ ಅನ್ನು ಸಮತೋಲನಗೊಳಿಸಲು ಮತ್ತು ವಿತ್ತೀಯ ಕೊರತೆಯನ್ನು ಸರಿದೂಗಿಸಲು ರಾಜ್ಯದ ಸಾಲವನ್ನು ನಿರ್ಧರಿಸುವ ಸಾಮರ್ಥ್ಯವು ಸಂಪೂರ್ಣವಾಗಿ ರಾಜ್ಯಗಳ ವ್ಯಾಪ್ತಿಯಲ್ಲಿರಬೇಕು.

  • ವಿಶೇಷವಾಗಿ, ಈ ವರ್ಷದ ಮಾರ್ಚ್ ಮತ್ತು ಆಗಸ್ಟ್‌ನಲ್ಲಿ ಬರೆದ ಪತ್ರಗಳ ಮುಖೇನ ಹಣಕಾಸು ಸಚಿವಾಲಯ ನೀಡಿದ ನಿರ್ದೇಶನಗಳು ಆಕ್ಷೇಪಾರ್ಹ.

  • ಹಣಕಾಸು ಕಾಯಿದೆ, 2018ರ ಮೂಲಕ ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯಿದೆ- 2003ರ ಸೆಕ್ಷನ್ 4ಕ್ಕೆ ಮಾಡಿರುವ ತಿದ್ದುಪಡಿಗಳು ಪ್ರಶ್ನಾರ್ಹವಾಗಿವೆ.

  • ಪತ್ರದ ಮೂಲಕ ಹೊರಡಿಸಲಾದ ನಿರ್ದೇಶನಗಳು, ರಾಜ್ಯವು ತನ್ನದೇ ಆದ ಹಣಕಾಸು ಸಾಲ ಪಡೆಯಲು ಮತ್ತು ನಿಯಂತ್ರಿಸಲು ಅಸಾಂವಿಧಾನಿಕ ಮಿತಿಗಳಾಗಿದ್ದು ಅಡೆತಡೆ ಒಡ್ಡುತ್ತವೆ.

  • ಕೇಂದ್ರ ಸರ್ಕಾರದ ಇಂತಹ ಕ್ರಮಗಳಿಂದಾಗಿ ರಾಜ್ಯ ಸರ್ಕಾರ 2016 ರಿಂದ 2023ರ ಆರ್ಥಿಕ ಅವಧಿಯಲ್ಲಿ 1,07,513.09 ಕೋಟಿ ರೂ.ಗಳ ಸಂಚಿತ ವೆಚ್ಚ ನಷ್ಟ ಅಥವಾ ಸಂಪನ್ಮೂಲ ಕೊರತೆ ಅನುಭವಿಸಿದೆ.

  • ಈ ಕಾರಣದಿಂದಾಗಿ, ರಾಜ್ಯವು ತನ್ನ ವಾರ್ಷಿಕ ಬಜೆಟ್‌ಗಳಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ.

  • ಪರಿಣಾಮವಾಗಿ ತಾನು ಕಲ್ಯಾಣ ಯೋಜನೆಗಳ ಮೂಲಕ ರಾಜ್ಯದ ಜನರಿಗೆ, ವಿಶೇಷವಾಗಿ ಬಡವರು ಮತ್ತು ದುರ್ಬಲರು, ವಿವಿಧ ಫಲಾನುಭವಿ ಸಮುದಾಯಗಳು, ರಾಜ್ಯ ಸರ್ಕಾರದ ನೌಕರರು, ಪಿಂಚಣಿದಾರರು ಹಾಗೂ ಅದರ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ಬಾಕಿ ಪಾವತಿಸಬೇಕಾಗಿದೆ.

ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಬಗ್ಗೆ ಆಯಾ ರಾಜ್ಯಪಾಲರುಗಳು ನಿಷ್ಕ್ರಿಯವಾಗಿರುವುದರ ವಿರುದ್ಧ ವಿವಿಧ ರಾಜ್ಯಗಳು ಈಚೆಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವುದರ ನಡುವೆಯೇ ಹಣಕಾಸು ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಕದ ತಟ್ಟಿರುವ ಎರಡನೇ ರಾಜ್ಯ ಕೇರಳವಾಗಿದೆ.

ಆಹಾರ ಧಾನ್ಯಗಳ ಖರೀದಿಯ ಸಮಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ರಾಜ್ಯ ಸರ್ಕಾರ ವಿಧಿಸಿದ 4,000 ಕೋಟಿ ರೂ.ಗಿಂತ ಹೆಚ್ಚಿನ ಶಾಸನಬದ್ಧ ಶುಲ್ಕವನ್ನು ಮರುಪಾವತಿಸದ ಕಾರಣ ಪಂಜಾಬ್ ಸರ್ಕಾರ ಕೇಂದ್ರದ ವಿರುದ್ಧ ಈ ಹಿಂದೆ ಮೊಕದ್ದಮೆ ಹೂಡಿತ್ತು.