State Police Headquarters Kerala
State Police Headquarters Kerala 
ಸುದ್ದಿಗಳು

ಪೊಲೀಸ್‌ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದ ಕೇರಳ ಸರ್ಕಾರ; ಇತ್ತ ರಾಜ್ಯ ಬಿಜೆಪಿಯಿಂದ ಹೈಕೋರ್ಟ್‌ಗೆ ಮೊರೆ

Bar & Bench

ಮಾನಹಾನಿಕರ ಹಾಗೂ ನಿಂದನಾತ್ಮಕ ಸಂವಹನವನ್ನು ಸಾಮಾಜಿಕ ಮಾಧ್ಯಮಗಳು, ಆನ್‌ಲೈನ್ ಸೇರಿದಂತೆ ಯಾವುದೇ ರೀತಿಯಲ್ಲಿ ಪ್ರಸರಣ ಮಾಡುವ ಕೃತ್ಯವನ್ನು ಶಿಕ್ಷಿಸುವ ಸಲುವಾಗಿ ಕೇರಳ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಕೇರಳ ಪೊಲೀಸ್‌ ಕಾಯಿದೆಗೆ ತಿದ್ದುಪಡಿ ತಂದಿದೆ. ತಿದ್ದುಪಡಿಯ ಮೂಲಕ ಸೆಕ್ಷನ್‌ 118ಎ ಅನ್ನು ಕೇರಳ ಪೊಲೀಸ್‌ ಕಾಯಿದೆಗೆ ಸೇರ್ಪಡಣೆ ಮಾಡಿರುವ ಸುಗ್ರೀವಾಜ್ಞೆಗೆ ಕೇರಳ ರಾಜ್ಯಪಾಲ ಆರಿಫ್‌ ಮೊಹಮದ್‌ ಖಾನ್‌ ಶನಿವಾರ ಅಂಕಿತ ಹಾಕಿದ್ದಾರೆ.

ಸುಗ್ರೀವಾಜ್ಞೆ ಜಾರಿಗೆ ಬಂದ ಬೆನ್ನಿಗೇ ಅದರ ಹಿಂದಿನ ಉದ್ದೇಶದ ಕುರಿತಾಗಿ ಕೇರಳದ ರಾಜಕಾರಣದಲ್ಲಿ ತೀವ್ರ ಪರವಿರೋಧ ಚರ್ಚೆಗಳು ಎದ್ದಿವೆ. ಕೇರಳ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ ಸುರೇಂದ್ರನ್‌ ಅವರು ಸುಗ್ರೀವಾಜ್ಞೆಯ ವಿರುದ್ಧ ಹೈಕೋರ್ಟ್‌ ನಲ್ಲಿ ಸೋಮವಾರ ಅರ್ಜಿ ದಾಖಲಿಸಿದ್ದಾರೆ. ಕಾಯಿದೆ ತಿದ್ದುಪಡಿಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎನ್ನುವ ಆರೋಪ ಕೇಳಿಬಂದಿದೆ.

ಕಾಯಿದೆಗೆ ತಂದಿರುವ ನೂತನ ತಿದ್ದುಪಡಿಯಿಂದಾಗಿ, ಮತ್ತೊಬ್ಬ ವ್ಯಕ್ತಿಯ ಪ್ರತಿಷ್ಠೆಯನ್ನು ಕುಂದಿಸುವ, ವ್ಯಕ್ತಿತ್ವಕ್ಕೆ ಮಸಿ ಬಳಿಯುವ, ಹೆದರಿಸುವ, ನಿಂದಿಸುವ, ಅವಮಾನಿಸುವ, ತೇಜೋವಧೆ ಮಾಡುವ ಯಾವದೇ ಬಗೆಯ ವಿಷಯ, ವಿಚಾರಗಳ ಅಭಿವ್ಯಕ್ತಿ, ಪ್ರಕಟಣೆ, ಪ್ರಸರಣವನ್ನು ಸುಳ್ಳೆಂದು ಗೊತ್ತಿದ್ದೂ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಕಾಯಿದೆಯ ತಿದ್ದುಪಡಿಯಿಂದಾಗಿ ಈ ಬಗೆಯ ಕೃತ್ಯದಲ್ಲಿ ತೊಡಗಿದವರಿಗೆ 3 ವರ್ಷಗಳವರೆಗೆ ಕಾರಾಗೃಹವಾಸದ ಶಿಕ್ಷೆ, ರೂ.10,000 ದಂಡ ವಿಧಿಸಬಹುದಾಗಿದೆ. ಈ ಮುಂಚಿನ ಕಾಯಿದೆಯಲ್ಲಿದ್ದ ನ್ಯೂನತೆಯನ್ನು ಸರಿಪಡಿಸುವ ಸಲುವಾಗಿ ತಿದ್ದುಪಡಿಯನ್ನು ತಂದಿರುವುದಾಗಿ ಕೇರಳ ಸರ್ಕಾರ ತಿಳಿಸಿದೆ.

ಈ ಹಿಂದೆ, 2014ರಲ್ಲಿ ಸುಪ್ರೀಂ ಕೋರ್ಟ್‌ ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 66-ಎ ಮತ್ತು ಕೇರಳ ಪೊಲೀಸ್‌ ಕಾಯಿದೆಯ ಸೆಕ್ಷನ್‌ 118(ಡಿ) ಅನ್ನು ರದ್ದುಗೊಳಿಸಿತ್ತು. ಇದರಿಂದ ಉಂಟಾದ ನಿರ್ವಾತವನ್ನು ತುಂಬಲು ಕೇಂದ್ರ ಸರ್ಕಾರವು ಪರ್ಯಾಯ ನಿಬಂಧನೆಯನ್ನು ಈವರೆಗೆ ಜಾರಿಗೆ ತಂದಿಲ್ಲ. ಈ ನ್ಯೂನತೆಯನ್ನು ಸರಿಪಡಿಸುವ ಸಲುವಾಗಿ ಕೇರಳ ಸಚಿವ ಸಂಪುಟವು ಸುಗ್ರೀವಾಜ್ಞೆ ಜಾರಿಗೊಳಿಸಿದೆ ಎಂದು ಕೇರಳ ಸರ್ಕಾರದ ಪತ್ರಿಕಾ ಹೇಳಿಕೆ ತಿಳಿಸಿದೆ.

ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 66-ಎ ಮತ್ತು ಕೇರಳ ಪೊಲೀಸ್‌ ಕಾಯಿದೆಯ ಸೆಕ್ಷನ್‌ 118(ಡಿ)ಯು ಅಸ್ಪಷ್ಟವಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿದೆ ಹಾಗೂ ಇದರ ದುರ್ಬಳಕೆ ಸಾಧ್ಯ ಎನ್ನುವ ಕಾರಣವನ್ನು ನೀಡಿ ಸುಪ್ರೀಂ ಕೋರ್ಟ್‌ 2014ರಲ್ಲಿ ಈ ನಿಬಂಧನೆಗಳನ್ನು ರದ್ದುಗೊಳಿಸಿತ್ತು.