ʼದ ಕೇರಳ ಸ್ಟೋರಿʼ ಸಿನಿಮಾ ಬಿಡುಗಡೆ ನಿರ್ಬಂಧಿಸಿರುವ ಪಶ್ಚಿಮ ಬಂಗಾಳ ಸರ್ಕಾರದ ಕ್ರಮ ಪ್ರಶ್ನಿಸಿ ಸಿನಿಮಾ ತಯಾರಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ [ಸನ್‌ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರು ವರ್ಸಸ್ ಭಾರತ ಸರ್ಕಾರ].
ಇದೇ ವೇಳೆ, ಸಿನಿಮಾ ಪ್ರದರ್ಶನಕ್ಕೆ ವಾಸ್ತವದಲ್ಲಿ ನಿಷೇಧವಿರುವ ತಮಿಳುನಾಡು ಸರ್ಕಾರದಿಂದಲೂ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಬಯಸಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. “ದೇಶದ ವಿವಿಧೆಡೆ ಸಿನಿಮಾ ಬಿಡುಗಡೆಯಾಗಿದೆ…. ಪಶ್ಚಿಮ ಬಂಗಾಳ ಪ್ರತ್ಯೇಕವಲ್ಲ.. ಇದನ್ನು ಬೇರೆ ಕಡೆ ಬಿಡುಗಡೆ ಮಾಡಲಾಗಿದೆಯಲ್ಲಾ? ಪಶ್ಚಿಮ ಬಂಗಾಳದ ರೀತಿಯ ಜನಸಂಖ್ಯಾ ಸ್ವರೂಪವಿರುವ ಪ್ರದೇಶಗಳಲ್ಲಿಯೂ ಸಹ ಸಿನಿಮಾ ಬಿಡುಗಡೆಯಾಗಿದೆ. ಚಿತ್ರ ಉತ್ತಮವೇ, ಅಲ್ಲವೇ ಎನ್ನುವ ಸಿನಿಮಾತ್ಮಕ ಮೌಲ್ಯದ ಪ್ರಶ್ನೆ ಇಲ್ಲಿ ಮೂಡುವುದಿಲ್ಲ” ಎಂದು ಸಿಜೆಐ ಡಿ ವೈ ಚಂದ್ರಚೂಡ್ ಮತ್ತು ನ್ಯಾ. ಪಿ ಎಸ್ ನರಸಿಂಹ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.
ಎಲ್ಲಾ ಪಕ್ಷಕಾರರನ್ನು ಆಲಿಸದೇ ಯಾವುದೇ ಆದೇಶ ಮಾಡುವುದಿಲ್ಲ. ಹೀಗಾಗಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತು.