Karnataka High Court 
ಸುದ್ದಿಗಳು

ಮಂಗಳೂರಿನಲ್ಲಿ ಕೇರಳದ ಅಶ್ರಫ್ ಕೊಲೆ: ಹತ್ತು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪದ ಮೈದಾನದಲ್ಲಿ 2025ರ ಏಪ್ರಿಲ್ 27ರಂದು ಸಂಜೆ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಅಶ್ರಫ್‌ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.

Bar & Bench

ಮಂಗಳೂರು ನಗರದ ಹೊರವಲಯದ ಕುಡುಪುವಿನಲ್ಲಿ ನಡೆದಿದ್ದ ಕೇರಳದ ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಹತ್ತು ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಪ್ರಕರಣದ ಆರೋಪಿಗಳಾದ ಅನಿಲ್ ಕುಮಾರ್, ಸಾಯಿದೀಪ್, ಅನಿಲ್ ಕುಮಾರ್, ಯತಿರಾಜ್, ಮನೀಶ್ ಶೆಟ್ಟಿ, ಪ್ರದೀಪ್, ವಿವಿಯನ್ ಆಲ್ವರಿಸ್, ಶ್ರೀದತ್ತ, ಧನುಷ್ ಹಾಗೂ ಕಿಶೋರ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.

Justice Mohammad Nawaz

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ, ಬದಲಾದ ಸನ್ನಿವೇಶದಲ್ಲಿ ಆರೋಪಿಗಳು ಜಾಮೀನು ಕೋರಿ ವಿಚಾರಣಾ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟು, ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2025ರ ಏಪ್ರಿಲ್ 27ರಂದು ಸಂಜೆ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪದ ಮೈದಾನದಲ್ಲಿ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಅಶ್ರಫ್‌ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಯಾದ ವ್ಯಕ್ತಿ ವಯನಾಡ್‌ನ ಅಶ್ರಫ್‌ ಎಂದು 29ರಂದು ಸಂಜೆ ಖಾತ್ರಿಯಾಗಿತ್ತು.