Justice BR Gavai 
ಸುದ್ದಿಗಳು

ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಮೈಲಿಗಲ್ಲು: ನ್ಯಾ. ಬಿ ಆರ್ ಗವಾಯಿ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಎಸ್.ಎನ್.ಭುಯಾನ್ ಅವರ ಶತಮಾನೋತ್ಸವ ಸಮಾರಂಭದಲ್ಲಿ ನ್ಯಾ. ಗವಾಯಿ ಉಪನ್ಯಾಸ ನೀಡಿದರು. ಎಸ್ಎನ್ ಭುಯಾನ್ ಅವರು ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ತಂದೆ.

Bar & Bench

ಕೇಶವನಾಂದ ಭಾರತಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣದಲ್ಲಿ ಸಂವಿಧಾನದ ಮೂಲ ರಚನಾ ಸಿದ್ಧಾಂತವನ್ನು ಪ್ರತಿಪಾದಿಸಿ ಸುಪ್ರೀಂ ಕೋರ್ಟ್‌ ನೀಡಿದ ಮಹತ್ವದ ತೀರ್ಪು ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಆದರ್ಶಗಳನ್ನು ಮುನ್ನಡೆಸುವ ಮೈಲಿಗಲ್ಲು ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಶನಿವಾರ ಹೇಳಿದರು.

ಅಸ್ಸಾಂನ ಗುವಾಹಟಿಯಲ್ಲಿ ನಡೆದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಎಸ್.ಎನ್.ಭುಯಾನ್ ಅವರ ಶತಮಾನೋತ್ಸವ ಸಮಾರಂಭದಲ್ಲಿ ಅವರು  'ಭಾರತದ ಸಂವಿಧಾನದ 75 ವರ್ಷಗಳು: ಡಾ ಅಂಬೇಡ್ಕರ್ ಅವರ ದೃಷ್ಟಿ ಮತ್ತು ಸಾಮಾಜಿಕ ನ್ಯಾಯ' ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಎಸ್ಎನ್ ಭುಯಾನ್ ಅವರು ಅಸ್ಸಾಂನ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ  ಎಸ್ಎನ್ ಭುಯಾನ್ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ತಂದೆ.

ಸುಪ್ರೀಂ ಕೋರ್ಟ್ ಸದಾ ಮೂಲಭೂತ ಹಕ್ಕುಗಳ ಪರವಾಗಿ ನಿಂತಿದ್ದು ಕಾಲಾನಂತರದಲ್ಲಿ ಅನೇಕ ಹಕ್ಕುಗಳು ವಿಕಸನಗೊಂಡಿವೆ ಎಂದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಅಸ್ಪೃಶ್ಯರಿಗಿಂತಲೂ ಕೆಟ್ಟ ಸ್ಥಿತಿ ಎದುರಿಸಿದರು. ಆದರೆ ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸಲು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ದಾಪುಗಾಲಿಟ್ಟಿದೆ ಎಂಬದಾಗಿ ತಿಳಿಸಿದರು.

ಅಲ್ಲದೆ ನನ್ನಂತಹವರು ಬದುಕಿನಲ್ಲಿ ಯಶಸ್ವಿಯಾಗಲು ಸಂವಿಧಾನ ಮತ್ತು ಬಿ ಆರ್‌ ಅಂಬೇಡ್ಕರ್‌ ಮಾತ್ರ ಕಾರಣ ಎಂದು ಪುನರುಚ್ಚರಿಸಿದರು.

ಇದೇ ವೇಳೆ ಮಾತನಾಡಿದ ನ್ಯಾ. ಉಜ್ಜಲ್‌ ಭುಯಾನ್‌ ಅವರು ಗವಾಯಿ ಅವರು ಈಚೆಗೆ ನೀಡಿದ  ಎಸ್‌ಸಿ ಎಸ್‌ಟಿ ಉಪವರ್ಗೀಕರಣ ಕುರಿತಾದ ತೀರ್ಪನ್ನು ಪ್ರಸ್ತಾಪಿಸಿದರು. ಅವರ ಅಭಿಪ್ರಾಯ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ ಎಂದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎನ್ ಕೋಟೀಶ್ವರ್ ಸಿಂಗ್, ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ಅಡ್ವೊಕೇಟ್-ಆನ್-ರೆಕಾರ್ಡ್ ಸಂಘದ ​​ಅಧ್ಯಕ್ಷ ವಿಪಿನ್ ನಾಯರ್, ಅಸ್ಸಾಂ ಅಡ್ವೊಕೇಟ್ ಜನರಲ್ ದೇವಜಿತ್ ಸೈಕಿಯಾ ಮತ್ತು ಗುವಾಹಟಿ ಹೈಕೋರ್ಟ್ ವಕೀಲರ ಸಂಘದ ​​ಅಧ್ಯಕ್ಷ ಕೆಎನ್ ಚೌಧರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.