Justice M I Arun and Karnataka HC
Justice M I Arun and Karnataka HC 
ಸುದ್ದಿಗಳು

ಭೂಸ್ವಾಧೀನಕ್ಕೂ ಮುನ್ನ ಕೈಗಾರಿಕೆಗೆ ಎಷ್ಟು ಭೂಮಿ ಅಗತ್ಯ ಎಂಬುದರ ಅಧ್ಯಯನವನ್ನು ಕೆಐಎಡಿಬಿ ನಡೆಸಬೇಕು: ಹೈಕೋರ್ಟ್‌

Bar & Bench

ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಜಮೀನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಮುಂದಾಗುವ ಮೊದಲು ಎಷ್ಟು ಪ್ರಮಾಣದ ಜಮೀನು ಕೈಗಾರಿಕಾ ಸ್ಥಾಪನೆಗೆ ಅಗತ್ಯವಿದೆ ಎಂಬ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಕೈಗಾರಿಕಾ ಪ್ರಾದೇಶಭಿವೃದ್ಧಿಗಾಗಿ ತಮ್ಮ ಜಮೀನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿ 14 ವರ್ಷ ಕಳೆದರೂ ಅಂತಿಮ ಅಧಿಸೂಚನೆ ಪ್ರಕಟಿಸದ ಕೆಐಎಡಿಬಿ ಕ್ರಮ ಪ್ರಶ್ನಿಸಿ ಚಿಕ್ಕಬಳ್ಳಾಪುರದ ಕೊಂಡಾರೆಡ್ಡಿ ಪಾಳ್ಯ ಗ್ರಾಮದ ನಿವಾಸಿ ಎಚ್‌ ಎಸ್‌ ಅಬ್ದುಲ್‌ ರಿಯಾಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ನೇತೃತ್ವದ ಏಕಸದಸ್ಯ ಪೀಠ ಮಾನ್ಯ ಮಾಡಿದೆ.

ರಾಜ್ಯದ ಸೂಕ್ತ ಜಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಪಡಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಯಿದೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಉದ್ದೇಶ ಸಾಧಿಸಲು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ಹಾಗೂ ಸೂಕ್ತವಾದ ಜಾಗ ಗುರುತಿಸುವುದು ಮತ್ತು ಒದಗಿಸುವುದು ಈ ಮಂಡಳಿಯ ಕರ್ತವ್ಯ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಆದರೆ, ಹಲವು ಸಂದರ್ಭದಲ್ಲಿ ಮಂಡಳಿ ತನ್ನ ಪ್ರಾಥಮಿಕ ಅಧಿಸೂಚನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿ, ಅಂತಿಮ ಅಧಿಸೂಚನೆ ಪ್ರಕಟಿಸುವಾಗ ಪ್ರಸ್ತಾವಿತ ಪ್ರಮಾಣದ ಪೈಕಿ ಶೇ.50ಕ್ಕಿಂತ ಕಡಿಮೆ ಸ್ವಾಧೀನಪಡಿಸಿಕೊಳ್ಳುತ್ತದೆ. ಇದು ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗುವ ಮುನ್ನ ಕೆಐಎಡಿಬಿ ಸೂಕ್ತ ಅಧ್ಯಯನ ನಡೆಸದೆ ಇರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.

ಅಲ್ಲದೇ, ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಶರವೇಗದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳದೆ ಇರುವುದರಿಂದ ಪ್ರಾಥಮಿಕ ಅಧಿಸೂಚನೆಯಲ್ಲಿ ಅಧಿಸೂಚಿತವಾದ ಭೂಮಿಯ ಮಾಲೀಕರಿಗೆ ಅನನುಕೂಲವಾಗುತ್ತದೆ. ಇದು ಭೂಮಿಯ ಸಾಮರ್ಥ್ಯವನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವುದರಿಂದ ಭೂ ಮಾಲೀಕನನ್ನು ತಡೆದಂತಾಗುತ್ತದೆ. ಪ್ರಾಥಮಿಕ ಅಧಿಸೂಚನೆ ಅಂಗೀಕರಿಸುವುದರಿಂದ ಭೂಮಿ ಮಾಲೀಕರು ಬಯಸಿದಂತೆ ಜಮೀನುಗಳನ್ನು ಅಭಿವೃದ್ಧಿಪಡಿಸಲು ಅವರಿಗೆ ಅಡ್ಡಿಯಾಗುತ್ತದೆ. ಆ ಭೂಮಿಯನ್ನು ಖರೀದಿಸಲು ಖರೀದಿದಾರರು ಮುಂದೆ ಬರುವುದಿಲ್ಲ ಎದು ನ್ಯಾಯಾಲಯವು ಅತೃಪ್ತಿ ಹೊರಹಾಕಿದೆ.

ಈ ಪ್ರಕರಣದಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 14 ವರ್ಷಗಳ ಕಳೆದಿವೆ. ಆದರೂ ಈವರೆಗೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳು ನಡೆದಿಲ್ಲ. ಹೀಗಾಗಿ, ಭೂ ಸ್ವಾಧೀನ ಪ್ರಕ್ರಿಯೆಗಳು ಮಾನ್ಯತೆ ಕಳೆದುಕೊಂಡಿದ್ದು, ಪ್ರಾಥಮಿಕ ಅಧಿಸೂಚನೆ ರದ್ದುಪಡಿಸಲು ಅರ್ಹವಾಗಿದೆ. ಕಾಯಿದೆಯಲ್ಲಿ ಅಂತಿಮ ಅಧಿಸೂಚನೆ ಪ್ರಕಟಿಸುವುದಕ್ಕೆ ಇರುವ ಕಾಲಮಿತಿ ಉಲ್ಲೇಖಿಸದಿದ್ದರೂ ಸೂಕ್ತವಾದ ಸಮಯದೊಳಗೆ ಅಂತಿಮ ಅಧಿಸೂಚನೆ ಪ್ರಕಟಿಸುವುದನ್ನು ಕೆಐಎಡಿಬಿ ಹಾಗೂ ಸಂಬಂಧಪಟ್ಟ ಇತರೆ ಸರ್ಕಾರಿ ಅಧಿಕಾರಗಳಿಂದ ನಿರೀಕ್ಷಿಸಲಾಗಿರುತ್ತದೆ. ಆದರೆ, 14 ವರ್ಷಗಳ ವಿಳಂಬವನ್ನು ಸಮಂಜಸ ಸಯಯ ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಪ್ರಕರಣದಲ್ಲಿ ಭೂ ಸ್ವಾಧೀನಕ್ಕೆ ಹೊರಡಿಸಿದ ಪ್ರಾಥಮಿಕ ಅಧಿಸೂಚನೆಯನ್ನು ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿತು.

ಆದರೆ, ಇದೇ ವೇಳೆ ಇದು ಕಾನೂನು ಪ್ರಕಾರ ಹೊಸದಾಗಿ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವುದರಿಂದ ಕೆಐಎಡಿಬಿ ಹಾಗೂ ಇತರೆ ಪ್ರತಿವಾದಿಗಳನ್ನು ನಿರ್ಬಂಧಿಸುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು. 

ಪ್ರಕರಣದ ಹಿನ್ನೆಲೆ: ಅರ್ಜಿದಾರರಿಗೆ ಸೇರಿದ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲ್ಲೂಕಿನ ಕಸಬ ಹೋಬಳಿಯ ಕೊಂಡಾರೆಡ್ಡಿ ಪಾಳ್ಯ ಗ್ರಾಮದ ಸರ್ವೇ ನಂಬರ್‌ 26ರ 2 ಎಕರೆ 27 ಗುಂಟೆ ಜಾಗವನ್ನು ಕೈಗಾರಿಕಾ ಪ್ರದೇಶಾವೃದ್ಧಿಗಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ 2009ರ ಡಿಸೆಂಬರ್‌ 11ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಅದಾಗಿ 14 ವರ್ಷ ಕಳೆದರೂ ಅಂತಿಮ ಅಧಿಸೂಚನೆ ಪ್ರಕಟವಾಗಿಲ್ಲ. ಆದ್ದರಿಂದ, ಪ್ರಾಥಮಿಕ ಅಧಿಸೂಚನೆ ರದ್ದುಪಡಿಸಬೇಕು ಎಂದು ಹೈಕೋರ್ಟ್‌ಗೆ ಅರ್ಜಿದಾರರು ಮನವಿ ಮಾಡಿದ್ದರು.