Bhavani Revanna and Karnataka HC 
ಸುದ್ದಿಗಳು

ಅಪಹರಣ ಪ್ರಕರಣ: ಭವಾನಿಗೆ ನಿರೀಕ್ಷಣಾ ಜಾಮೀನು ಮಂಜೂರು; ಎಸ್‌ಐಟಿ ವಿಚಾರಣೆಗೆ ಇಂದೇ ಹಾಜರಾಗಲು ಹೈಕೋರ್ಟ್‌ ಆದೇಶ

Siddesh M S

ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಹಗರಣದಲ್ಲಿನ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

  1. ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಭವಾನಿ ವಿರುದ್ಧ ಜಾರಿ ಮಾಡಿರುವ ಬಂಧನ ವಾರೆಂಟ್‌ ಅನ್ನು ಅಮಾನತಿನಲ್ಲಿರಿಸಿರುವ ಹೈಕೋರ್ಟ್‌, ಇಂದು ಮಧ್ಯಾಹ್ನ 1 ಗಂಟೆಗೆ ವಿಶೇಷ ತನಿಖಾ ದಳದ (ಎಸ್‌ಐಟಿ) ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಭವಾನಿಗೆ ಕಟ್ಟಪ್ಪಣೆ ವಿಧಿಸಿದೆ.

  2. ಭವಾನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಎಸ್‌ಐಟಿಯು ಭವಾನಿ ಅವರನ್ನು ಬಂಧಿಸಬಾರದು ಅಥವಾ ವಶಕ್ಕೆ ಪಡೆಯಬಾರದು.

  3. ಇದು ನಿರೀಕ್ಷಣಾ ಜಾಮೀನು ಆದೇಶವಾಗಿದ್ದು, ಭವಾನಿಗೆ ಯಾವುದೇ ಪಾರಿತೋಷಕ ನೀಡುತ್ತಿಲ್ಲ. ಹೀಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಸಂಭ್ರಮಿಸುವಂತಿಲ್ಲ.

  4. ಭವಾನಿ ಇಂದು ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕು. ತನಿಖಾ ಪ್ರಕ್ರಿಯೆಗೆ ಸಂಪೂರ್ಣವಾಗಿ ಸಹಕರಿಸಬೇಕು. ತನಿಖೆಯ ನೆಪದಲ್ಲಿ ಆಕೆಯನ್ನು ಸಂಜೆ 5 ಗಂಟೆಯ ಮೇಲೆ ಎಸ್‌ಐಟಿ ಇಟ್ಟುಕೊಳ್ಳುವಂತಿಲ್ಲ. ಇದು ಮುಂದಿನ ದಿನಗಳ ವಿಚಾರಣೆಗೂ ಇದು ಅನ್ವಯಿಸುತ್ತದೆ.

  5. ಇಂಥ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವಿಧಿಸುವ ಷರತ್ತುಗಳು ಈ ಪ್ರಕರಣಕ್ಕೂ ಅನ್ವಯಿಸುತ್ತವೆ.

  6. ಭವಾನಿ ಅವರು ಮೈಸೂರಿನ ಕೆ ಆರ್‌ ತಾಲ್ಲೂಕು ಮತ್ತು ಹಾಸನ ಜಿಲ್ಲೆಗೆ ಪ್ರವೇಶಿಸಬಾರದು.

ಇದಕ್ಕೂ ಮುನ್ನ, ಭವಾನಿ ಅವರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಂದೇಶ್‌ ಜೆ. ಚೌಟ ಅವರು “ಭವಾನಿ ಮಹಿಳೆಯಾಗಿದ್ದು, ಎಫ್‌ಐಆರ್‌ನಲ್ಲಿ ಆಕೆಯ ಹೆಸರಿಲ್ಲ. ರೇವಣ್ಣ ಮತ್ತು ಸತೀಶ್‌ ಬಾಬಣ್ಣ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಿಂದ ಭವಾನಿ ವಿರುದ್ಧ ಬಂಧನ ವಾರೆಂಟ್‌ ಆದೇಶವನ್ನು ಎಸ್‌ಐಟಿ ಪಡೆದಿದೆ. ಇದು ಮಾಧ್ಯಮಗಳಲ್ಲಿ ಬಂದಿದೆ. ನಿರೀಕ್ಷಣಾ ಜಾಮೀನು ಅರ್ಜಿ ಪರಿಗಣಿಸಲು 11 ಕಾರಣಗಳಿವೆ” ಎಂದರು.

ಮುಂದುವರಿದು, “ಐಪಿಸಿ ಸೆಕ್ಷನ್‌ 364(ಎ), 365 ಜೊತೆಗೆ 34 ಪ್ರಕರಣ ದಾಖಲಿಸಲಾಗಿತ್ತು. ಆನಂತರ ಐಪಿಸಿ ಸೆಕ್ಷನ್‌ 109 ಮತ್ತು 120ಬಿ ಸೇರ್ಪಡೆ ಮಾಡಲಾಗಿದೆ” ಎಂದರು.

ಆಗ ಪೀಠವು “ಆಕ್ಷೇಪಣೆ ಸಲ್ಲಿಸಲಾಗಿದೆಯೇ? ವಾದಕ್ಕೆ ಸಿದ್ದರಿದ್ದೀರಾ?” ಎಂದು ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಎಸ್‌ಪಿಪಿ “ಪ್ರಕರಣ ಮೊದಲ ಬಾರಿಗೆ ವಿಚಾರಣೆಗೆ ಬಂದಿದೆ. ಇದು ರೇವಣ್ಣ ಜಾಮೀನು ರದ್ದತಿ ಕೋರಿರುವ ಅಪರಾಧಕ್ಕೆ ಸಂಬಂಧಿಸಿದ್ದಾಗಿದೆ” ಎಂದರು.

ಚೌಟ ಅವರನ್ನು ಕುರಿತು ಪೀಠವು “ಪತ್ರಿಕೆಗಳನ್ನು ಆಧರಿಸಿ ನೀವು ಬಂಧನ ವಾರೆಂಟ್‌ ವಿಚಾರ ಹೇಳಿದರೆ ನಾವು ಅರ್ಜಿ ವಜಾ ಮಾಡಬೇಕಾಗುತ್ತದೆ. ಪತ್ರಿಕೆಗಳವರನ್ನು ನಾವು ನೋಡಿದ್ದೇವೆ. ಅವರು ಏನೆಲ್ಲಾ ಮಾಡುತ್ತಾರೆ ಎಂದು” ಎಂದು ಖಾರವಾಗಿ ಪ್ರತಿಕ್ರಿಯಿಸಿತು.

ಮುಂದುವರಿದು ಪೀಠವು “ಭವಾನಿ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ಬಂಧನ ವಾರೆಂಟ್‌ ಜಾರಿ ಮಾಡಿದೆಯೇ? ಇದಕ್ಕೆ (ಸರ್ಕಾರ) ಉತ್ತರಿಸದಿದ್ದರೆ ರೆಜಿಸ್ಟ್ರಿಯಿಂದ ಪರಿಶೀಲಿಸುತ್ತೇನೆ. ನಾವು ಆಕೆಯನ್ನು ಎಸ್‌ಐಟಿ ಮುಂದೆ ಹಾಜರಾಗಲು ಆದೇಶಿಸುತ್ತೇವೆ. ಆದರೆ, ಬಂಧಿಸುವಂತಿಲ್ಲ. ಒಂದು ವಾರದಲ್ಲಿ ಏನೂ ಆಗುವುದಿಲ್ಲ. ಆಕೆ ತನಿಖೆಗೆ ಹಾಜರಾಗಬೇಕು. ಆಕೆಯನ್ನು ಬಂಧಿಸುವಂತಿಲ್ಲ. ಸೋಮವಾರ ವಿಚಾರಣೆ ನಡೆಸುವ ತುರ್ತೇನೂ ಇಲ್ಲ. ಹಲವು ಬಾಕಿ ಪ್ರಕರಣಗಳು ಇವೆ” ಎಂದು ಎಸ್‌ಪಿಪಿ ಕುರಿತು ಹೇಳಿತು.

ಈ ನಡುವೆ, ಎಸ್‌ಪಿಪಿ ಪ್ರೊ. ಕುಮಾರ್‌ “(ರೇವಣ್ಣ ಜಾಮೀನು ರದ್ದತಿ ಮತ್ತು ಭವಾನಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ) ಎರಡೂ ಪ್ರಕರಣಗಳನ್ನು ನ್ಯಾಯಾಲಯಕ್ಕೆ ಅನುಕೂಲವಾದ ದಿನ ತೆಗೆದುಕೊಳ್ಳಬಹುದು. ಸೋಮವಾರ ವಾದಿಸಲು ನಾವು ಸಿದ್ಧರಿದ್ದೇವೆ. ಜಾಮೀನುರಹಿತ ಬಂಧನ ವಾರೆಂಟ್‌ ಜಾರಿ ಮಾಡಲಾಗಿದೆ. ಭವಾನಿ ಮನೆಯ ಮುಂದೆ ಎಸ್‌ಐಟಿ ಅಧಿಕಾರಿಗಳು ಇಡೀ ದಿನ ಕಾದಿದ್ದಾರೆ. ಆಕೆ ಪಿತೂರಿ ಮಾಡಿರುವುದರಿಂದ ಆಕೆಯ ಕಸ್ಟಡಿ ವಿಚಾರಣೆ ಅಗತ್ಯ. ಭವಾನಿಯನ್ನು ಎಸ್‌ಐಟಿ ಮುಂದೆ ಹಾಜರಾಗಲು ಆದೇಶಿಸಿ, ನಾವು ತಕ್ಷಣದಿಂದಲೇ ವಿಚಾರಣೆ ಆರಂಭಿಸುತ್ತೇವೆ. ಆಕೆಯನ್ನು ಬಂಧಿಸುವುದಿಲ್ಲ. ಸೋಮವಾರ ಅರ್ಜಿ ವಿಚಾರಣೆ ನಡೆಸಬೇಕು” ಎಂದರು.

ಪೀಠವು ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಒಲವು ತೋರಿದ ಹಿನ್ನೆಲೆಯಲ್ಲಿ ಎಸ್‌ಪಿಪಿ ಪ್ರೊ. ಕುಮಾರ್‌ ಅವರು “ಭವಾನಿ ಅಪರಾಧ ನಡೆದಿರುವ ಸ್ಥಳಕ್ಕೆ ಹೋಗಬಾರದು. ಸಂತ್ರಸ್ತೆಯರು ಹಲವು ಕಡೆ ಇದ್ದಾರೆ. ಭವಾನಿ ಮಾಸ್ಟರ್‌ ಮೈಂಡ್‌ ಆಗಿದ್ದು, ಅದನ್ನು ನಾನು ತೋರಿಸುತ್ತೇನೆ” ಎಂದರು. ಇದನ್ನೂ ಪೀಠವು ಜಾಮೀನು ಷರತ್ತಿಗೆ ಸೇರ್ಪಡೆ ಮಾಡಿತು.