ಲೈಂಗಿಕ ದೌರ್ಜನ್ಯ ಹಗರಣದಲ್ಲಿನ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಶುಕ್ರವಾರಕ್ಕೆ (ಮೇ 24) ಮುಂದೂಡಿದೆ.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾಗಿರುವ ಎಚ್ ಕೆ ಸುಜಯ್, ಎಚ್ ಎನ್ ಮಧು, ಎಚ್ ಡಿ ಮನು ಗೌಡ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ನಡೆಸಿದರು.
ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್ ಜಗದೀಶ್ ಅವರು ಆಕ್ಷೇಪಣೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಿತು.
ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹೊಳೆನರಸೀಪುರ ಠಾಣೆಯಲ್ಲಿ ಏಪ್ರಿಲ್ 28ರಂದು ದೂರು ದಾಖಲಿಸಿದ್ದರು.
ಆನಂತರ ಅವರು ಮೈಸೂರಿನ ಕೆ ಆರ್ ನಗರ ವ್ಯಾಪ್ತಿಯ ತಮ್ಮ ನಿವಾಸಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತೆಯನ್ನು ಎಚ್ ಡಿ ರೇವಣ್ಣ ಸೂಚನೆಯ ಮೇರೆಗೆ ಎರಡನೇ ಆರೋಪಿ ಸತೀಶ್ ಬಾಬು ಕರೆದೊಯ್ದಿದ್ದರು. ಇಲ್ಲಿ ಸಂತ್ರಸ್ತೆಯನ್ನು ಕರೆದೊಯ್ಯಲು ಎಚ್ ಕೆ ಸುಜಯ್, ಎಚ್ ಎನ್ ಮಧು, ಎಚ್ ಡಿ ಮನು ಗೌಡ ನೆರವಾಗಿರುವ ಆರೋಪ ಎದುರಿಸುತ್ತಿದ್ದಾರೆ.
ಈ ಪ್ರಕರಣದಲ್ಲಿ ರೇವಣ್ಣ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಎರಡನೇ ಆರೋಪಿ ಸತೀಶ್ ಬಾಬು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸಂತ್ರಸ್ತೆ ಅಪಹರಣಕ್ಕೆ ಸಂಬಂಧಿಸಿದಂತೆ ಆಕೆಯ ಪುತ್ರ ನೀಡಿದ ದೂರಿನ ಅನ್ವಯ ಕೆ ಆರ್ ನಗರ ಠಾಣೆಯಲ್ಲಿ ಎಚ್ ಡಿ ರೇವಣ್ಣ ಮತ್ತು ಸತೀಶ್ ಬಾಬು, ಎಚ್ ಕೆ ಸುಜಯ್, ಎಚ್ ಎನ್ ಮಧು, ಎಚ್ ಡಿ ಮನು ಗೌಡ ವಿರುದ್ಧ ಐಪಿಸಿ ಸೆಕ್ಷನ್ 364ಎ, 365 ಜೊತೆಗೆ 34 ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ಅಪಹರಣವಾಗಿದೆ ಎಂದು ಆರೋಪಿಸಲಾದ ಮಹಿಳೆಯು ತನ್ನನ್ನು ಯಾರೂ ಅಪಹರಿಸಿಲ್ಲ. ಸ್ವಚ್ಛೆಯಿಂದ ಸಂಬಂಧಿಯ ಮನೆಗೆ ಬಂದಿದ್ದಾಗಿ ತಿಳಿಸಿದ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.