ಸುದ್ದಿಗಳು

ಬೆಂಗಳೂರು ಪ್ರಧಾನ ಸೆಷನ್ಸ್ ನ್ಯಾಯಾಧೀಶರಾಗಿ ನ್ಯಾ.ಹುದ್ದಾರ್‌, ಕಾನೂನು ಇಲಾಖೆ ಕಾರ್ಯದರ್ಶಿಯಾಗಿ ನ್ಯಾ.ಪ್ರಭಾವತಿ ನೇಮಕ

ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್‌ ನಾಯ್ಕ್‌‌ ನ್ಯಾಯಾಂಗ ಸೇವೆಗೆ ಮರಳಿದ್ದಾರೆ. ಸಿಬಿಐ ವಿಶೇಷ ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರನ್ನು ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ನಿಯುಕ್ತಿ ಮಾಡಲಾಗಿದೆ.

Bar & Bench

ಬೆಂಗಳೂರಿನ ಪ್ರಧಾನ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರಾಗಿರುವ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ್‌ ಸೇರಿದಂತೆ 13 ನ್ಯಾಯಾಂಗ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ನೇಮಿಸಿ ವರ್ಗಾವಣೆ ಮಾಡಿ ಕರ್ನಾಟಕ ಹೈಕೋರ್ಟ್‌ನ ಪ್ರಭಾರಿ ರಿಜಿಸ್ಟ್ರಾರ್‌ ಜನರಲ್‌ ಬಿ. ಮುರಳೀಧರ್‌ ಪೈ ಅವರು ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಚಂದ್ರಶೇಖರ್‌ ಎಂ ಜೋಶಿ ಅವರ ಪದೋನ್ನತಿಯಿಂದ ಬೆಂಗಳೂರಿನ ಪ್ರಧಾನ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರ ಹುದ್ದೆ ಖಾಲಿಯಾಗಿತ್ತು.

ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಟಿ. ವೆಂಕಟೇಶ್‌ ನಾಯ್ಕ್‌ ಅವರನ್ನು ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಸ್ಮಾಲ್‌ ಕಾಸಸ್‌ ನ್ಯಾಯಾಲಯದ ಮುಖ್ಯ ನ್ಯಾಯಾಧೀಶೆ ಪ್ರಭಾವತಿ ಮೃತ್ಯುಂಜಯ ಹಿರೇಮಠ ಅವರನ್ನು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಿಯೋಜನೆ ಮೇರೆಗೆ ನೇಮಿಸಲು ರಾಜ್ಯ ಸರ್ಕಾರದ ಸೇವೆಗೆ ನೀಡಲಾಗಿದೆ.

ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ನರಹರಿ ಪ್ರಭಾಕರ ಮರಾಟೆ ಅವರನ್ನು ಬೆಂಗಳೂರು ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಬೆಂಗಳೂರಿನ 66ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾಗಿರುವ ಸಂತೋಷ್‌ ಗಜಾನನ್‌ ಭಟ್‌ ಅವರನ್ನು ನೇಮಕ ಮಾಡುವ ಸಂಬಂಧ ರಾಜ್ಯ ಸರ್ಕಾರದ ಸೇವೆಗೆ ಒದಗಿಸಲಾಗಿದೆ. ನ್ಯಾ. ಸಂತೋಷ್‌ ಗಜಾನನ್‌ ಭಟ್‌ ಅವರು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು.

ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಭಾವಚಿತ್ರ ಇಡುವ ವಿಚಾರದಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯ ಮಂಡಳಿ ಮೇಲುಸ್ತುವಾರಿ ಅಧಿಕಾರಿ ಹುದ್ದೆಯಿಂದ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯ ಮಂಡಳಿ ಮೇಲ್ವಿಚಾರಣಾ ಅಧಿಕಾರಿ ಹುದ್ದೆಗೆ ಕರ್ನಾಟಕ ಮೇಲ್ಮನವಿ ನ್ಯಾಯ ಮಂಡಳಿ ಸದಸ್ಯರಾಗಿರುವ ಎಸ್‌ ಮಹಾಲಕ್ಷ್ಮಿ ನೆರಲೆ ಅವರನ್ನು ನಿಯೋಜನೆ ಮೇರೆಗೆ ನೇಮಕ ಮಾಡುವ ಸಂಬಂಧ ರಾಜ್ಯ ಸರ್ಕಾರದ ಸೇವೆಗೆ ನೀಡಲಾಗಿದೆ.

ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ಅವರನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಮೇಲ್ಮನವಿ ನ್ಯಾಯ ಮಂಡಳಿ ಸದಸ್ಯರಾದ ಕೆ ಬಿ ಗೀತಾ ಅವರನ್ನು ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಲಾಗಿದೆ.

ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ತ್ಯಾಗರಾಜ ಎನ್.‌ ಇನವಲ್ಲಿ ಅವರನ್ನು ಬೆಂಗಳೂರು ನಗರದ ಸ್ಮಾಲ್‌ ಕಾಸಸ್‌ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ ಎನ್‌ ಸುಬ್ರಮಣ್ಯ ಅವರನ್ನು ಬೆಂಗಳೂರಿನ ಕೈಗಾರಿಕಾ ನ್ಯಾಯ ಮಂಡಳಿಯ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಾಫಾ ಹುಸೈನ್‌ ಸಯದ್‌ ಅಜೀಜ್‌ ಅವರನ್ನು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹುಬ್ಬಳ್ಳಿ ಕಾರ್ಮಿಕ ನ್ಯಾಯಾಲಯದ ಮೇಲುಸ್ತುವಾರಿ ಅಧಿಕಾರಿಯಾದ ಮಾರುತಿ ಬಗಾಡೆ ಅವರನ್ನು ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಈ ಎಲ್ಲಾ ನ್ಯಾಯಾಂಗ ಅಧಿಕಾರಿಗಳು ಸೆಪ್ಟೆಂಬರ್‌ 12ರಂದು ಅಧಿಕಾರ ಸ್ವೀಕರಿಸಲು ನಿರ್ದೇಶಿಸಲಾಗಿದೆ.