AG KK Venugopal  
ಸುದ್ದಿಗಳು

ರಾಜ್ಯಪಾಲರು ಯಾವಾಗ ಮಸೂದೆಗಳನ್ನು ರಾಷ್ಟ್ರಪತಿಗೆ ರವಾನಿಸಬಹುದು: ಪರಿಶೀಲಿಸಲಿರುವ ಸುಪ್ರೀಂ ಕೋರ್ಟ್‌

ಕೇರಳ ವಿಧಾನಸಭೆ ಅನುಮೋದಿಸಿರುವ ಏಳು ಮಸೂದೆಗಳನ್ನು ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಅವರು ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಕೆ ಕೆ ವೇಣುಗೋಪಾಲ್‌ ಹೇಳಿದರು.

Bar & Bench

ರಾಜ್ಯ ವಿಧಾನಸಭೆ ಅನುಮೋದಿಸಿದ ಮಸೂದೆಗಳನ್ನು ರಾಜ್ಯಪಾಲರು ಯಾವಾಗ ರಾಷ್ಟ್ರಪತಿ ಅವರಿಗೆ ರವಾನಿಸಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ರೂಪಿಸುವುದನ್ನು ಪರಿಗಣಿಸಲಾಗುವುದು ಎಂದು ಬುಧವಾರ ಸುಪ್ರೀಂ ಕೋರ್ಟ್‌ ಹೇಳಿದೆ [ಕೇರಳ ಸರ್ಕಾರ ಮತ್ತು ಇತರರು ವರ್ಸಸ್‌ ಕೇರಳದ ರಾಜ್ಯಪಾಲರು ಮತ್ತು ಇತರರು].

ರಾಜ್ಯ ವಿಧಾನಸಭೆ ಅನುಮೋದಿಸಿರುವ ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲರಾದ ಆರೀಫ್‌ ಮೊಹಮ್ಮದ್‌ ಖಾನ್‌ ಅವರು ತಡ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಕೇರಳ ಸರ್ಕಾರದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಹಿರಿಯ ವಕೀಲ ಕೆ ಕೆ ವೇಣುಗೋಪಾಲ್‌ ಅವರು ಕೇರಳ ವಿಧಾನಸಭೆ ಅನುಮೋದಿಸಿರುವ ಏಳು ಮಸೂದೆಗಳನ್ನು ರಾಜ್ಯಪಾಲರು ರಾಷ್ಟ್ರಪತಿಗೆ ರವಾನಿಸಿದ್ದಾರೆ ಎಂದು ಪೀಠದ ಗಮನಸೆಳೆದರು.

ಇದಕ್ಕೆ ಪೀಠವು ವಿಧಾನಸಭೆ ಅನುಮೋದಿಸಿರುವ ಎಂಟು ಮಸೂದೆಗಳಿಗೆ ಒಪ್ಪಿಗೆ ನೀಡದೇ ಎರಡು ವರ್ಷಗಳಿಂದ ತಡೆ ಹಿಡಿದಿರುವ ಕೇರಳ ರಾಜ್ಯಪಾಲರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ರಾಜ್ಯದಲ್ಲಿ ಇದೇ ರೀತಿ ಬಿಕ್ಕಿಟ್ಟು ಮುಂದುವರಿದರೆ ಕಾನೂನು ರೂಪಿಸುವ ಮೂಲಕ ತಾನು ಸಾಂವಿಧಾನಿಕ ಕರ್ತವ್ಯ ನಿಭಾಯಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿತು.

ಯಾವಾಗ ರಾಜ್ಯಪಾಲರು ಮಸೂದೆಗಳನ್ನು ರಾಷ್ಟ್ರಪತಿಗೆ ಕಳುಹಿಸಬಹುದು ಎಂಬ ವಿಚಾರ ಅರ್ಜಿಯಲ್ಲಿ ಕೋರಿಕೆಯಾಗಿಲ್ಲವಾದ್ದರಿಂದ ಮಾರ್ಗಸೂಚಿ ರೂಪಿಸುವ ಒಲವನ್ನು ನ್ಯಾಯಾಲಯವು ವ್ಯಕ್ತಪಡಿಸಲಿಲ್ಲ. ಆನಂತರ ಅರ್ಜಿಯಲ್ಲಿ ಅಗತ್ಯ ತಿದ್ದುಪಡಿ ಮಾಡುವಂತೆ ಕೇರಳ ಸರ್ಕಾರಕ್ಕೆ ನ್ಯಾಯಾಲಯವು ಸೂಚಿಸಿತು.

ಕೇರಳ ಸರ್ಕಾರ ಅನುಮೋದಿಸಿ ರಾಜ್ಯಪಾಲರ ಸಹಿಗಾಗಿ ಕಳುಹಿಸಿರುವ ಎಂಟು ಮಸೂದೆಗಳ ಪೈಕಿ ಏಳು ಮಸೂದೆಗಳು ಕೇಂದ್ರದ ಕಾನೂನಿನ ಜೊತೆ ಯಾವುದೇ ಸಂಘರ್ಷ ಹೊಂದಿಲ್ಲ. ವಿಧಾನಸಭೆಗೆ ಪೂರಕವಾಗಿ ಕೆಲಸ ಮಾಡುವುದನ್ನು ಬಿಟ್ಟು ರಾಜ್ಯಪಾಲರು ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ವೇಣುಗೋಪಾಲ್‌ ತಿಳಿಸಿದರು.

ಇದಕ್ಕೆ ಪೀಠವು “ವಾದದಲ್ಲಿ ತಿರುಳಿದೆ ಎಂದೆನಿಸುತ್ತದೆ. ವಿಧಾನಸಭೆ ಕಳುಹಿಸಿರುವ ಮಸೂದೆಗಳನ್ನು ಎರಡು ವರ್ಷಗಳಿಂದ ಇಟ್ಟುಕೊಂಡು ರಾಜ್ಯಪಾಲರು ಏನು ಮಾಡುತ್ತಿದ್ದಾರೆ” ಎಂದಿತು.

ಇದಕ್ಕೆ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು “ಈ ವಿಚಾರದಲ್ಲಿ ಏನನ್ನೂ ಹೇಳಬಯಸುವುದಿಲ್ಲ. ಏನಾದರು ಹೇಳಿದರೆ ಹಲವು ವಿಚಾರಗಳು ಬಹಿರಂಗವಾಗಲಿವೆ” ಎಂದರು.

ಅಂತಿಮವಾಗಿ ಅರ್ಜಿಯಲ್ಲಿ ಯಾವಾಗ ರಾಜ್ಯಪಾಲರು ಮಸೂದೆಗಳನ್ನು ರಾಷ್ಟ್ರಪತಿಗೆ ಕಳುಹಿಸಬಹುದು. ಈ ಸಂಬಂಧ ಮಾರ್ಗಸೂಚಿ ರೂಪಿಸಬೇಕು ಎಂಬ ಅಂಶ ಸೇರಿಸಿ, ತಿದ್ದುಪಡಿ ಮಾಡುವಂತೆ ಕೇರಳ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತು.