ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಬಳಿಯ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಯಲ್ಲಿ ಸುಮಾರು 300 ಮನೆಗಳನ್ನು ನೆಲಸಮ ಮಾಡಿ, ಮೂರು ಸಾವಿರಕ್ಕೂ ಹೆಚ್ಚು ಜನರನ್ನು ರಾಜ್ಯ ಸರ್ಕಾರ ನಿರ್ಗತಿಕರನ್ನಾಗಿಸಲಾಗಿದೆ ಎಂದು ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರ, ಬೆಂಗಳೂರು ಮಹಾ ನಗರ ಪಾಲಿಕೆ, ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ಉತ್ತರ ತಾಲ್ಲೂಕು ತಹಸೀಲ್ದಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿಯು ಇನ್ನಷ್ಟೇ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ನಿಗದಿಯಾಗಬೇಕಾಗಿದೆ.
ವಾಸಿಂ ಹಾಗೂ ಫಕೀರ್ ಕಾಲೊನಿಯಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ಕೆಡವುದಕ್ಕೂ ಮುನ್ನ ಯಾವುದೇ ನೋಟಸ್ ಜಾರಿ ಮಾಡಿಲ್ಲ. ತಮ್ಮ ಅಹವಾಲುಗಳನ್ನು ಆಲಿಸಿಲ್ಲ. ಬಡಾವಣೆಯಲ್ಲಿ ನೆಲೆಸಿರುವ ಹಲವು ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಬಹುತೇಕರು ತಮ್ಮ ಮನೆಗಳಿಗೆ ಸಂಬಂಧಿಸಿದಂತೆ ದಾಖಲೆ ಇಟ್ಟುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಬಿಬಿಎಂಪಿ ಅಧಿಕಾರಿಗಳು ಅಕ್ರಮ ಒತ್ತುವರಿ ಎಂಬ ಆರೋಪದಲ್ಲಿ ಮನೆಗಳನ್ನು ತೆರವು ಮಾಡುವುದಕ್ಕೂ ಮುನ್ನ ಷೋಕಾಸ್ ನೋಟಿಸ್ ಜಾರಿ ಮಾಡಿ 15 ದಿನಗಳ ಕಾಲಾವಕಾಶ ನೀಡಬೇಕು. ಬುಲ್ಡೋಜರ್ ಬಳಕೆ ಮಾಡಿ ಮನೆ ನೆಲಸಮಗೊಳಿಸಬಾರದು. ತೆರವು ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ಲಿಖಿತ ನೋಟಿಸ್ ಜಾರಿ ಮಾಡಿ, ಅವರರನ್ನು ವಿಚಾರಣೆಗೊಳಪಡಿಸಲು ಸಮಯಾವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸರ್ಕಾರದ ಅಧಿಕಾರಿಗಳು ಸುಪ್ರೀಂ ಕೋರ್ಟ್ನ ಈ ಆದೇಶಕ್ಕೆ ತದ್ವಿರುದ್ದವಾಗಿ ನಡೆದುಕೊಂಡು, ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಬಡಾವಣೆ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನೂರಾರ ವಿದ್ಯಾರ್ಥಿಗಳ ಸಮವಸ್ತ್ರ, ಪುಸ್ತಕಗ, ಹಾಲ್ ಟಿಕೆಟ್ಗಳು ನಾಶವಾಗಿದ್ದು, ಅವರ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಫಕೀರ್ ಮತ್ತು ವಾಸಿಂ ಕಾಲೊನಿಯ ಎಲ್ಲಾ ನಿರಾಶ್ರಿತರಿಗೆ ಅಲ್ಲಿಂದ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪುನರ್ವಸತಿ ಅಥವಾ ಪರ್ಯಾಯ ವಸತಿ ಒದಗಿಸಬೇಕು. ಅದಕ್ಕಾಗಿ ಸಮೀಕ್ಷೆ ನಡೆಸಬೇಕು. ಹಲವು ವರ್ಷಗಳ ಕಾಲ ಶ್ರಮಿಸಿ ನಿರ್ಮಿಸಿರುವ ಮನೆಗಳನ್ನು ಕೆಡವಿರುವುದರಿಂದ ಪರಿಹಾರ ಒದಗಿಸಬೇಕು. ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಕೋರಲಾಗಿದೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘಿಸಿ, ಮನೆ ಕೆಡವಿರುವ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ನಷ್ಟ ಮತ್ತು ಹಾನಿಗೆ ಅಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಬೇಕು. ಸಂತ್ರಸ್ತರಾಗಿರುವ ಅಂಗವಿಕಲರು, ಮಹಿಳೆಯರು ಮತ್ತು ವೃದ್ಧರಿಗೆ ಶುದ್ದ ಕುಡಿಯುವ ನೀರು ಮತ್ತು ಪೌಷ್ಠಿಕ ಆಹಾರ ತಕ್ಷಣದಿಂದಲೇ ಪೂರೈಸಬೇಕು. ಪುರುಷರು ಮತ್ತು ಮಹಿಳೆಯರಿಗೆ ತಾತ್ಕಾಲಿಕವಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ನ್ಯಾಪ್ಕಿನ್ ಸೇರಿದಂತೆ ಅಗತ್ಯ ನೈರ್ಮಲ್ಯ ಸಾಮಗ್ರಿಗಳನ್ನು ಒದಗಿಸಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ಭದ್ರತೆ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.
ಮನೆ ಕಳೆದು ಬೀದಿ ಪಾಲಾಗಿರುವವರಿಗೆ ಸಾಂಕ್ರಾಮಿಕ ರೋಗ ತಗುಲುವ ಸಾಧ್ಯತೆಯಿದ್ದು, ಸ್ಥಳದಲ್ಲಿ ತಾತ್ಕಾಲಿಕ ವೈದ್ಯಕೀಯ ಶಿಬಿರ ಪ್ರಾರಂಭಿಸಿ ತಕ್ಷಣ ಚಿಕಿತ್ಸೆ ಲಭ್ಯವಾಗುವಂತೆ ಮಾಡಬೇಕಾಗಿದೆ. ತೆರವು ಕಾರ್ಯಚರಣೆ ವೇಳೆ ಮೂಲ ಹಾಲ್ ಟಿಕೆಟ್ ನಾಶವಾಗಿದ್ದು, ಪರೀಕ್ಷೆ ಬರೆಯುವುದಕ್ಕೆ ಸಾಧ್ಯವಾಗದಂತಹ ವಿದ್ಯಾರ್ಥಿಗಳಿಗೆ ನಕಲು ಹಾಲ್ ಟಿಕೆಟ್ ಪ್ರತಿ ಕಲ್ಪಿಸಿ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಮಾಡಬೇಕು. ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೈಕ್ಷಣಿಕ ಸಾಮಗ್ರಿ (ಪುಸ್ತಕ, ನೋಟ್ ಬುಕ್, ಅಧ್ಯಯನ ಸಾಮಗ್ರಿ ಮತ್ತು ಸಮವಸ್ತ್ರ) ಒದಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.