ತನ್ನ ತಾಯಿಯನ್ನು ಬರ್ಬರವಾಗಿ ಕೊಂದು, ದೇಹ ತುಂಡರಿಸಿ ಬೇಯಿಸಿದ್ದ ಅಪರಾಧಿ ಕೊಲ್ಲಾಪುರದ ಸುನಿಲ್ ರಾಮ ಕುಚಕೊರವಿಗೆ ವಿಧಿಸಿದ್ದ ಮರಣದಂಡನೆಗೆ ಸುಪ್ರೀಂ ಕೋರ್ಟ್ ಈಚೆಗೆ ತಡೆ ನೀಡಿದೆ [ಸುನಿಲ್ ರಾಮ ಕುಚಕೊರವಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಎತ್ತಿಹಿಡಿದಿದ್ದ ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕುಚಕೊರವಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ಪಂಕಜ್ ಮಿತ್ತಲ್ ಹಾಗೂ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನೋಟಿಸ್ ಜಾರಿಗೊಳಿಸಿತು.
"ದಿನಾಂಕ 14.04.2025ರೊಳಗೆ ಪ್ರತಿಕ್ರಿಯಿಸುವಂತೆ ನೋಟಿಸ್ ನೀಡಿ. ಈ ಮಧ್ಯೆ ಮರಣದಂಡನೆ ತಡೆಹಿಡಿಯಲಾಗುತ್ತಿದೆ. ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ನ ದಾಖಲೆಗಳು ಅನುವಾದಿತ ಪ್ರತಿಗಳು ಅವುಗಳ ಸಾಫ್ಟ್ ಕಾಪಿಗಳನ್ನು ನೀಡಿ" ಎಂದು ನ್ಯಾಯಾಲಯ ಡಿಸೆಂಬರ್ 11ರ ಆದೇಶದಲ್ಲಿ ತಿಳಿಸಿದೆ. ಆರೋಪಿ ಪರವಾಗಿ ವಕೀಲರಾದ ಪಯೇಶಿ ಮತ್ತು ವೈರವನ್ ಎ ಎಸ್ ವಾದ ಮಂಡಿಸಿದರು.
ಆಗಸ್ಟ್ 28, 2017ರಂದು ಕುಚಕೊರವಿ ತನ್ನ 60 ವರ್ಷದ ತಾಯಿ ಯಲ್ಲವ್ವ ಕುಚಕೊರವಿಯನ್ನು ಕೊಲೆ ಮಾಡಿದ್ದ. ಜೊತೆಗೆ ಆಕೆಯ ದೇಹದ ಭಾಗಗಳನ್ನು ಹೊರತೆಗೆದು ಉಪ್ಪು ಮತ್ತು ಮೆಣಸಿನ ಪುಡಿಯೊಂದಿಗೆ ಬೇಯಿಸಿದ್ದ.
ಕಳೆದ ಅಕ್ಟೋಬರ್ 1ರಂದು, ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರಿದ್ದ ಪೀಠ ಜುಲೈ 2021ರಲ್ಲಿ ಕೊಲ್ಲಾಪುರದ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಎತ್ತಿಹಿಡಿದಿತ್ತು.
ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕುಚಕೊರವಿ ಅಪರಾಧಿ ಎಂದಿದ್ದ ಉಚ್ಚ ನ್ಯಾಯಾಲಯ ಆರೋಪಿಯ ಕೃತ್ಯ ನರಭಕ್ಷಣೆಯನ್ನು ಹೋಲುತ್ತಿದ್ದು ಆತ ತನ್ನ ಬದುಕಿನಲ್ಲಿ ಸುಧಾರಣೆ ಕಂಡುಕೊಳ್ಳುವುದು ಅಸಾಧ್ಯ ಎಂಬುದಾಗಿ ತಿಳಿಸಿತ್ತು.
ಹಂದಿ ಮತ್ತು ಬೆಕ್ಕುಗಳನ್ನು ತಿನ್ನುವ ಅಭ್ಯಾಸವಿದ್ದ ಅಪರಾಧಿ ತನ್ನ ತಾಯಿಯ ಮಾಂಸ ತಿನ್ನಲೆಂದೇ ಆಕೆಯನ್ನು ಕೊಂದಿರಬೇಕು. ಇದು ದಾಖಲೆಗಳಿಂದ ಸ್ಪಷ್ಟವಾಗಿದೆ. ಆತನಿಗೆ ನರಭಕ್ಷಣೆಯ ರೋಗಲಕ್ಷಣ ಇರುವ ಬಲವಾದ ಸಾಧ್ಯತೆಗಳಿವೆ ಎಂದು ಅಪರಾಧವನ್ನು ಅತ್ಯಂತ ಕ್ರೂರ, ಅನಾಗರಿಕ ಮತ್ತು ಭೀಕರ ಎಂದು ಹೈಕೋರ್ಟ್ ವಿವರಿಸಿತ್ತು.
ನರಭಕ್ಷೆಣೆಯೆಡೆಗೆ ಅಪರಾಧಿಗೆ ಇರುವ ಒಲವನ್ನು ಪರಿಗಣಿಸಿ ಜೈಲಿನಲ್ಲಿರುವ ಇತರ ಕೈದಿಗಳಿಗೆ ಸಂಭವನೀಯ ಅಪಾಯವಿರುವುದರಿಂದ ಜೀವಾವಧಿ ಶಿಕ್ಷೆಯನ್ನು ನೀಡುವುದು ಅಪಾಯಕಾರಿ ಎಂದು ನ್ಯಾಯಾಲಯ ತಿಳಿಸಿತ್ತು.
ಅತ್ಯಲ್ಪ ಪಿಂಚಣಿಯಿಂದ ಜೀವನ ಸಾಗಿಸುತ್ತಿರುವ ವಿಧವೆ ಯಲ್ಲವ್ವ, ತನ್ನ ಮಗನಿಗೆ ಆತನ ಹಿಂಸಾತ್ಮಕ ವರ್ತನೆಯ ಹೊರತಾಗಿಯೂ ಊಟ, ತಿಂಡಿ ಒದಗಿಸುತ್ತಿದ್ದಳು.
ಘಟನೆ ನಡೆದ ಕೆಲ ಹೊತ್ತಿನಲ್ಲಿ ಯಲ್ಲವ್ವನ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಎಂಟು ವರ್ಷದ ನೆರೆಮನೆಯ ಬಾಲಕಿ ಗಮನಿಸಿದ ನಂತರ ಘಟನೆ ಬೆಳಕಿಗೆ ಬಂದಿತ್ತು. ರಕ್ತ ಮೆತ್ತಿಕೊಂಡಿದ್ದ ಕೈ ಹಾಗೂ ಬಟ್ಟೆಗಳೊಂದಿಗೆ ಕುಚಕೊರವಿಯು ತಾಯಿಯ ಶವದ ಬಳಿ ನಿಂತಿರುವುದನ್ನು ಬಾಲಕಿ ಕಂಡಿದ್ದಳು. ಘಟನೆಯಿಂದ ಸಮಾಜಕ್ಕೆ ಉಂಟಾದ ಆಘಾತದ ಬಗ್ಗೆಯೂ ಹೈಕೋರ್ಟ್ ಎತ್ತಿ ತೋರಿಸಿತ್ತು.
ಕೃಶಳಾದ, ಹಿರಿಯ ವೃದ್ಧೆಯು ತನ್ನೆಲ್ಲಾ ಕಷ್ಟದ ನಡುವೆಯೂ ತಾನೇ ದಿನವೂ ಎರಡು ಹೊತ್ತು ಊಟ ಹಾಕಿ ಬಲಿಷ್ಠವಾಗಿ ಬೆಳಸಿದ್ದ ಮಗನಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ ಎಂದು ಕೃತ್ಯದ ದಾರುಣತೆಯ ಬಗ್ಗೆ ನ್ಯಾಯಾಲಯ ವಿಷಾದ ವ್ಯಕ್ತಪಡಿಸಿತ್ತು.