AS Ponnanna, Senior Advocate
AS Ponnanna, Senior Advocate 
ಸುದ್ದಿಗಳು

ಶಾಸಕ ಪೊನ್ನಣ್ಣ ಅವರನ್ನು ಕಾನೂನು ಸಚಿವರನ್ನಾಗಿ ನೇಮಿಸಿಲು ಕೆಪಿಸಿಸಿ ಕಾನೂನು ಘಟಕದ ಆಗ್ರಹ

Bar & Bench

ವಿರಾಜಪೇಟೆಯಿಂದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿರುವ ಕೆಪಿಸಿಸಿ ಕಾನೂನು ಘಟಕದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರನ್ನು ಕಾನೂನು ಸಚಿವರನ್ನಾಗಿ ನೇಮಕ ಮಾಡುವಂತೆ ಕೆಪಿಸಿಸಿ ಕಾನೂನು ಘಟಕವು ಮಂಗಳವಾರ ನಿರ್ಣಯ ಕೈಗೊಂಡಿದೆ.

ಆರು ವರ್ಷಗಳ ಕಾಲ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ ಅನುಭವವಿರುವ ಪೊನ್ನಣ್ಣ ಅವರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ವಿವಿಧ ಪ್ರಕರಣಗಳಲ್ಲಿ ಸಿಲುಕಿಕೊಂಡಾಗ ಅವರನ್ನು ಪ್ರತಿನಿಧಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ವಕೀಲರ ರಕ್ಷಣಾ ಕಾಯಿದೆ ರೂಪಿಸುವಲ್ಲಿಯೂ ಪೊನ್ನಣ್ಣ ಅವರ ಶ್ರಮಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ವಕೀಲರ ಸಮುದಾಯ ರಾಜ್ಯದಲ್ಲಿದ್ದು, 65 ಸಾವಿರಕ್ಕೂ ಅಧಿಕ ವಕೀಲರು ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಈ ಸಮುದಾಯ ಪ್ರತಿನಿಧಿಸುವ ಪೊನ್ನಣ್ಣ ಅವರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸುವುದರಿಂದ ಸರಿಯಾದ ಸಂದೇಶ ರವಾನಿಸಿದಂತಾಗುತ್ತದೆ ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.

ಈ ನೆಲೆಯಲ್ಲಿ ಪೊನ್ನಣ್ಣ ಅವರನ್ನು ಕಾನೂನು ಸಚಿವರನ್ನಾಗಿ ನೇಮಕ ಮಾಡುವಂತೆ ಕೋರಿರುವ ನಿರ್ಣಯವನ್ನು ಎಐಸಿಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ, ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಪರಿಷತ್‌ ಶಾಸಕಾಂಗ ಪಕ್ಷದ ನಾಯಕರಿಗೆ ಕಳುಹಿಸಿಕೊಡಲು ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ಘಟಕದ ಉಸ್ತುವಾರಿ ಅಧ್ಯಕ್ಷರಾದ ವಕೀಲ ಎಸ್‌ ಎ ಅಹ್ಮದ್‌ ಅವರಿಗೆ ನೀಡಲಾಗಿದೆ ಎಂದು ವಿವರಿಸಲಾಗಿದೆ.