ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ವತಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ತಡೆಹಿಡಿಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಬೆಂಗಳೂರಿನ ತಿಂಡ್ಲು ನಿವಾಸಿ ಎ ವಿ ನಾಗೇಂದ್ರ ಪ್ರಸಾದ್ ಮನವಿ ಸಲ್ಲಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ರಾಮನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿ ಇನ್ನಷ್ಟೇ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಯಾವುದೇ ರಾಜಕೀಯ ಪಕ್ಷಗಳಿಗೆ ಮೆರವಣಿಗೆ, ಧರಣಿ ಹಾಗೂ ಪ್ರತಿಭಟನೆ ನಡೆಸಲು ಅನುಮತಿ ನೀಡದಂತೆ ಹಾಗೂ ಮೇಕೆದಾಟು ಯೋಜನೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆ ಮುಂದುವರಿಸದಂತೆ ಕೆಪಿಸಿಸಿಯನ್ನು ನಿರ್ಬಂಧಿಸುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ನಿರ್ಬಂಧ ಹೇರಿರುವ ನಡುವೆಯೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಭಾನುವಾರದಿಂದ 10 ದಿನಗಳ ಪಾದಯಾತ್ರೆ ಆರಂಭಿಸಿದೆ. ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷದೊಂದಿಗೆ ನಡೆಯುತ್ತಿರುವ ಪಾದಯಾತ್ರೆಯ ನೇತೃತ್ವವವನ್ನು ಕೆಪಿಸಿಸಿ ಅಧ್ಯಕ್ಷ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಹಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಕಾರ್ಯಕರ್ತರು, ಮುಖಂಡರು, ಸಾಂಸ್ಕೃತಿಕ ತಂಡಗಳು ಸೇರಿ ಸಾವಿರಾರು ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ, ಕೋವಿಡ್ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರೂಪಾಂತರಿ ಒಮಿಕ್ರಾನ್ ವೈರಸ್ ಸಮುದಾಯಕ್ಕೆ ಹಬ್ಬುವ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಸಾರ್ವಜನಿಕ ಚಟುವಟಿಕೆ ನಿರ್ಬಂಧಿಸಲು ಜನವರಿ 19ರವರೆಗೆ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂಗಳನ್ನು ಜಾರಿಗೆ ತರಲಾಗಿದೆ. ಜತೆಗೆ, ಎಲ್ಲ ರೀತಿಯ ಮೆರವಣಿಗೆ, ಧರಣಿ, ಪ್ರತಿಭಟನೆಗಳನ್ನೂ ನಿರ್ಬಂಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಕೆಪಿಸಿಸಿ ಪಾದಯಾತ್ರೆ ನಡೆಸುತ್ತಿದ್ದರೂ, ಸರ್ಕಾರ ಪಾದಯಾತ್ರೆ ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.