ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಅವರು ಕಳೆದ ಮೂರು ವರ್ಷಗಳಿಂದ ನಡೆಸಿರುವ ಹಣದ ವ್ಯವಹಾರದ ಬಗ್ಗೆ ಏನಾದರೂ ಲೋಪಗಳು ಇದ್ದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಈ ವಿಚಾರವನ್ನು ತೆರಿಗೆ ಅಧಿಕಾರಿಗಳ (ಐ ಟಿ) ಗಮನಕ್ಕೆ ತಂದು ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬಹುದು ಎಂದು ಬೆಂಗಳೂರಿನ ಸತ್ರ ನ್ಯಾಯಾಲಯದ ಮುಂದೆ ಸಾಹುಕಾರ್ ಪರ ಹಿರಿಯ ವಕೀಲರು ಪ್ರತಿಪಾದಿಸಿದ್ದಾರೆ.
ಪಶುವೈದ್ಯಾಧಿಕಾರಿಗಳ ನೇಮಕದ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಆರೋಪದಡಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಇ ಡಿ ವಿಶೇಷ ನ್ಯಾಯಾಲಯದ ಸತ್ರ ನ್ಯಾಯಾಧೀಶ ಮಂಜುನಾಥ ಸಂಗ್ರೇಶಿ ಮಂಗಳವಾರ ವಿಚಾರಣೆ ನಡೆಸಿದರು.
ವಿಚಾರಣೆಯಲ್ಲಿ ಸಾಹುಕಾರ್ ಪರ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರು “ಇ ಡಿ ತನಿಖಾಧಿಕಾರಿಗಳು ಅರ್ಜಿದಾರರ ವಿರುದ್ಧ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಶಾಮೀಲಾದ ಆರೋಪಗಳನ್ನು ಹೊರತುಪಡಿಸಿ ಅವರ ಬ್ಯಾಂಕ್ ಖಾತೆಗಳ ವಹಿವಾಟಿನ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದಾರೆ. ಅವಕ್ಕೆಲ್ಲಾ ಸೂಕ್ತ ದಾಖಲೆ ಇರುವಾಗ ಸತ್ಯಾಂಶಗಳನ್ನು ಮರೆಮಾಚಿ ಅವರನ್ನು ವಶಕ್ಕೆ ಪಡೆಯಲಾಗಿದೆ” ಎಂದು ಆಕ್ಷೇಪಿಸಿದರು.
“ತನಿಖೆಯಲ್ಲಿ ತಾವು ಏನೇನೊ ಕಂಡು ಬಿಟ್ಟಿದ್ದೇವೆ. ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ ಎಂದೆಲ್ಲಾ ಹೇಳಿದ್ದಾರೆ. ಆದರೆ, ಇವನ್ನೆಲ್ಲಾ ಪಂಚರ ಸಮಕ್ಷಮದಲ್ಲಿ ಮಹಜರು ಮಾಡಿಯೇ ಇಲ್ಲ. ಮುಂದೊಂದು ದಿನ ಕಾಲ ಎದುರಾದಾಗ ಅವುಗಳನ್ನು ನಾವು ಒಪ್ಪಿಸುತ್ತೇವೆ ಎಂಬುದು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾದುದು ಮತ್ತು ಅವರ ಇಚ್ಛೆಗೆ ಬಿಟ್ಟ ವಿಚಾರವಲ್ಲ” ಎಂದು ಪ್ರತಿಪಾದಿಸಿದರು.
“ಸಾಹುಕಾರ್ ಅಧ್ಯಕ್ಷರಾಗಿದ್ದ ಅವಧಿಯಿಂದ ನಡೆದಿರಬಹುದು ಎನ್ನಲಾದ ಅಕ್ರಮಗಳ ಆರೋಪಗಳನ್ನು ಊಹಿಸಿ ತನಿಖಾ ವ್ಯಾಪ್ತಿ ಮೀರಿ ಸಾಹುಕಾರ ಅವರನ್ನು ಬಂಧಿಸಿರುವುದು ಕಾನೂನು ಪ್ರಕಾರ ತಪ್ಪು. ಒಂದು ವೇಳೆ ಸಾಕ್ಷ್ಯಗಳಿದ್ದರೆ ಅವುಗಳನ್ನೆಲ್ಲಾ ಕೋರ್ಟ್ ಮುಂದೆ ಹಾಜರುಪಡಿಸಬೇಕು” ಎಂದು ಸವಾಲೆಸೆದರು.
“ಸಾಹುಕಾರ್ ವಿರುದ್ಧ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಏನಾದರೂ ಆರೋಪಗಳಿದ್ದರೆ ಇ ಡಿ ಅಧಿಕಾರಿಗಳು ಆ ಬಗ್ಗೆ ತೆರಿಗೆ ಇಲಾಖೆಗೆ ದೂರು ನೀಡಬಹುದು ಅಥವಾ ಈ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ತಂದು ಒಪ್ಪಿಸಬಹುದು. ಈ ದಿಸೆಯಲ್ಲಿ ನ್ಯಾಯಾಲಯ ತನ್ನ ವಿವೇಚನಾಧಿಕಾರ ಬಳಸುವುದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಹನುಮಂತರಾಯ ಅವರು ನ್ಯಾಯಾಧೀಶರಿಗೆ ಮನವಿ ಮಾಡಿದರು.
ಕೋರ್ಟ್ ಕಲಾಪದ ಅವಧಿ ಮುಗಿದ ಕಾರಣ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಲಾಗಿದೆ. ಇ ಡಿ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಮಧು ಎನ್.ರಾವ್ ಮತ್ತು ಮಹೇಶ್ವರಿ ಹಾಜರಿದ್ದರು. ಸಾಹುಕಾರ ಪರ ಹೈಕೋರ್ಟ್ ವಕೀಲ ಬಿ.ಸಿದ್ದೇಶ್ವರ ವಕಾಲತ್ತು ವಹಿಸಿದ್ದಾರೆ.
ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ಜಾರಿ ನಿರ್ದೇಶನಾಲಯ ಸಾಹುಕಾರ್ ವಿರುದ್ಧ ಇ ಡಿ ಪ್ರಕರಣ ದಾಖಲಿಸಿದೆ.