ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸಿದ್ದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್‌ಗೆ ಶುಕ್ರವಾರ ಬೆಂಗಳೂರಿನ ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಗಂಗ್ವಾರ್, ಪ್ರಮುಖ ಆರೋಪಿಯಾಗಿರುವ ಬಸವರಾಜ್ ಕನ್ನಾಳೆ ಹಾಗೂ ಅಭ್ಯರ್ಥಿಗಳ ನಡುವೆ ಹಣದ ವ್ಯವಹಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಸೂಕ್ತ ದಾಖಲೆಗಳನ್ನು ಸಲ್ಲಿಸಿದೆ. ಹೀಗಾಗಿ, ಇದು ಜಾಮೀನು ಮಂಜೂರು ಮಾಡುವ ಪ್ರಕರಣವಲ್ಲ ಎಂದು 51ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಎಸ್ ನಿರ್ಮಲಾ ದೇವಿ ಆದೇಶಿಸಿದ್ದಾರೆ.
ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಗಂಗ್ವಾರ್ ಐದನೇ ಆರೋಪಿಯಾಗಿದ್ದು, ಕನ್ನಾಳೆಯನ್ನು ಆರನೇ ಆರೋಪಿಯನ್ನಾಗಿ ಮಾಡಲಾಗಿದೆ. ಇವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 318(3) ಮತ್ತು ಕರ್ನಾಟಕ ಸರ್ಕಾರಿ ಪರೀಕ್ಷೆಗಳ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ತಡೆಯುವ ಕ್ರಮಗಳು) ಕಾಯಿದೆ 2023ರ ಅಡಿ ಪ್ರಕರಣ ದಾಖಲಾಗಿದೆ.
ಕನ್ನಾಳೆ ಮತ್ತು ಗಂಗ್ವಾರ್ ಅವರ ಬ್ಯಾಂಕ್ ದಾಖಲೆಗಳು ಹಣ ವರ್ಗಾವಣೆಯಾಗಿರುವುದಕ್ಕೆ ಸೂಕ್ತ ಆಧಾರವಾಗಿವೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ. “ಆಯ್ಕೆಯಾಗಿರುವ ಅಭ್ಯರ್ಥಿಗಳು 15,00,014 ರೂಪಾಯಿಯನ್ನು ಕನ್ನಾಳೆ ಖಾತೆಗೆ ಡೆಪಾಸಿಟ್ ಮಾಡಿದ್ದು, ಅದನ್ನು ಗಂಗ್ವಾರ್ ಖಾತೆಗೆ ವರ್ಗಾಯಿಸಲಾಗಿದೆ. ಒಟ್ಟು ₹52.30 ಲಕ್ಷ ಹಣವನ್ನು ಗಂಗ್ವಾರ್ ಅವರು ಭೀಮಾ ಜ್ಯುವೆಲರ್ಸ್‌ನಲ್ಲಿ ಬಂಗಾರ ಖರೀದಿಗೆ ಬಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಫೋಟೊ ಮತ್ತು ದಾಖಲೆಗಳನ್ನು ಪ್ರಾಸಿಕ್ಯೂಷನ್ ಸಲ್ಲಿಸಿರುವುದನ್ನು ನ್ಯಾಯಾಲಯ ಪರಿಗಣಿಸಿದೆ.
“ಗಂಗ್ವಾರ್ ಎಲ್ಲಿ ಪ್ರಶ್ನೆಪತ್ರಿಕೆಗಳನ್ನು ಕನ್ನಾಳೆಗೆ ನೀಡಿದ್ದಾರೆ ಎಂಬ ಸ್ಥಳವನ್ನು ಗುರುತಿಸಲಾಗಿದ್ದು, ಇದಕ್ಕಾಗಿ ಬಳಿಸಲಾದ ಶಮೋಮಿ ಟ್ಯಾಬ್ಲೆಟ್ ಅನ್ನು ನಾಶಪಡಿಸಲಾಗಿದೆ. ಜಫ್ತಿ ಮಾಡಲಾದ ವಸ್ತುಗಳ ವಿಧಿ ವಿಜ್ಞಾನ ತನಿಖೆ ಬಾಕಿಯಿದ್ದು, ಅಭ್ಯರ್ಥಿಗಳು ಮತ್ತು ಸಾಕ್ಷಿಗಳ ಹೇಳಿಕೆ ದಾಖಲು ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಅರ್ಜಿದಾರರು ಐಎಎಸ್ ಅಧಿಕಾರಿಯಾಗಿದ್ದು, ಅವರನ್ನು ಬಿಡುಗಡೆ ಮಾಡಿದರೆ ಸಾಕ್ಷಿ ನಾಶಪಡಿಸಿ, ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ” ಎಂದು ನ್ಯಾಯಾಲಯ ಹೇಳಿದೆ.
ಕೃತ್ಯಕ್ಕೆ ಬಳಸಲಾದ ಶವೋಮಿ ಟ್ಯಾಬ್ ಅನ್ನು ನಾಶಪಡಿಸುವ ಅಪರಾಧದಲ್ಲಿ ಗಂಗ್ವಾರ್ ಭಾಗಿಯಾಗಿದ್ದಾರೆ ಎಂಬುದನ್ನೂ ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಗಂಗ್ವಾರ್ ಹೆಸರಿನಲ್ಲಿ 54 ವಿಮಾನ ಟಿಕೆಟ್, ಯಶಿ ಜೈಸ್ವಾಲ್ ಎಂಬವರ ಹೆಸರಿನಲ್ಲಿ ಕಾಯ್ದಿರಿಸಿರುವ 11 ಟಿಕೆಟ್ ಸೇರಿ ಇದಕ್ಕೆ ₹11.37 ಲಕ್ಷ ವೆಚ್ಚವಾಗಿದೆ. ಗಂಗ್ವಾರ್ ಮತ್ತು ಕನ್ನಾಳೆ ನಡುವಿನ ಕರೆ ಸಂವಹನವನ್ನೂ ನ್ಯಾಯಾಲಯ ಪರಿಗಣಿಸಿದೆ.
ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದು, ಆ ಆಧಾರದ ಮೇಲೆ ಗಂಗ್ವಾರ್ ಜಾಮೀನು ಕೋರಿದ್ದಕ್ಕೂ ನ್ಯಾಯಾಲಯ ನಿರಾಕರಿಸಿದೆ. ಯಾವುದೇ ತೆರನಾದ ಗಂಭೀರ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಗಂಗ್ವಾರ್ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಪೀಠ ಹೇಳಿದೆ.
ಈ ಹಂತದಲ್ಲಿ ಜಾಮೀನು ಮಂಜೂರು ಮಾಡಲು ಸೂಕ್ತ ಆಧಾರಗಳನ್ನು ಗಂಗ್ವಾರ್ ಒದಗಿಸದಿರುವುದರಿಂದ ಅರ್ಜಿ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಗಂಗ್ವಾರ್ ಸದ್ಯ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದು, ಇಂದು ಆರು ದಿನಗಳ ಕಸ್ಟಡಿ ಮುಗಿಯಲಿದೆ. ಈಚೆಗೆ ಕರ್ನಾಟಕ ಹೈಕೋರ್ಟ್ ಪಶು ವೈದ್ಯಾಧಿಕಾರಿ ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿ ನೇಮಕಾತಿ ಹಗರಣದ ತನಿಖೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಐವರು ಅಧಿಕಾರಿಗಳನ್ನು ನೇಮಿಸಿದೆ.