ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು.
ಪಶುವೈದ್ಯಾಧಿಕಾರಿ ಡಾ.ಮಂಜುನಾಥ್ 2026ರ ಜುಲೈ 25ರಂದು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೆಪಿಎಸ್‌ಸಿ ನಡೆಸಿರುವ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ 2026ರ ಜುಲೈ 17ರಂದು ಪ್ರಕಟವಾಗಿದೆ. ಅದರಲ್ಲಿ ಉನ್ನತ ಶ್ರೇಣಿ ಪಡೆದಿರುವ ಹಲವು ಅಭ್ಯರ್ಥಿಗಳು ಕೆಪಿಎಸ್‌ಸಿಯ ಹಾಲಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಯ ಸಂಬಂಧಿಕರಾಗಿದ್ದಾರೆ. ಅವರು ಪರೀಕ್ಷೆ ನಡೆಯುವ ಎರಡು ದಿನ ಮುನ್ನ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದರು. ಅವರನ್ನು ರೆಸಾರ್ಟ್‌ಗೆ ಕರೆದೊಯ್ದು ಪ್ರಶ್ನೆಗಳನ್ನು ನೀಡಿ ತರಬೇತಿ ನೀಡಲಾಗಿದೆ. ಇನ್ನೂ ಕೆಲ ಅಭ್ಯರ್ಥಿಗಳ ಓಎಂಆರ್ ಶೀಟ್ ತಿದ್ದಲಾಗಿದೆ. ಈ ಹಗರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕೋರಿದ್ದರು. ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.
ಇದರಿಂದ ಬಂಧನ ಭೀತಿ ಎದುರಿಸುತ್ತಿದ್ದ ಶಿವಶಂಕರಪ್ಪ ಸಾಹುಕಾರ್ ನಿರೀಕ್ಷಣಾ ಜಾಮೀನು ಕೋರಿ 52ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು 2026ರ ಆಗಸ್ಟ್ 11ರಂದು ವಜಾಗೊಳಿಸಿದ್ದ ನ್ಯಾಯಾಲಯವು ಪ್ರಕರಣದಲ್ಲಿನ ಆರೋಪಗಳು ಗಂಭೀರವಾಗಿದೆ. ಸದ್ಯ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಜಾಮೀನು ನೀಡಲಾಗದು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.