ಕೆಪಿಎಸ್‌ಸಿ ನೇಮಕಾತಿ ಹಗರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ನೀಡಬೇಕು ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಮತ್ತು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ ಕೋರಿದೆ. ಆದರೆ ತನಿಖೆ, ನೇಮಕಾತಿ ಅಕ್ರಮ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಪ್ರತಿಯೊಂದು ಸಮಸ್ಯೆಗೂ ಸಿಬಿಐಗೆ ವರ್ಗಾವಣೆ ಸಾರ್ವತ್ರಿಕ ಪರಿಹಾರವಾಗಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ರಾಜ್ಯ ಪೊಲೀಸರ ನಡೆ ಸಂಶಯಾಸ್ಪದವಾಗಿಲ್ಲ ಅಥವಾ ತನಿಖಾ ಸಂಸ್ಥೆಯ ಹೆಸರಿನೊಂದಿಗೆ 'ಸಿಬಿಐ' ಎಂಬ ಸಂಕ್ಷಿಪ್ತ ರೂಪವನ್ನು ಸೇರಿಸಿದಾಗ ಮಾತ್ರ ಅದಕ್ಕೆ ವಿಶ್ವಾಸಾರ್ಹತೆ ಲಭಿಸುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ವ್ಯಾಖ್ಯಾನಿಸಿದ್ದಾರೆ.
ಈ ಪ್ರಕರಣಗಳಲ್ಲಿನ ವಿಶಿಷ್ಟ ಸನ್ನಿವೇಶಗಳನ್ನು ಗಮನಿಸಿದಾಗ ಸಿಐಡಿ ಅಥವಾ ಸಂಬಂಧಪಟ್ಟ ಪೊಲೀಸರಿಂದ ತನಿಖೆ ಮುಂದುವರಿಸುವುದು ಸೂಕ್ತವಲ್ಲ. ಅದೇ ಸಮಯದಲ್ಲಿ, ಸಿಬಿಐ ತನಿಖೆಯನ್ನು ವಹಿಸುವುದೊಂದೇ ಲಭ್ಯವಿರುವ ಏಕೈಕ ಮಾರ್ಗವೆಂಬ ಅಭಿಪ್ರಾಯವನ್ನೂ ಈ ನ್ಯಾಯಾಲಯ ಒಪ್ಪುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
“ಭಾರತದ ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಈ ನ್ಯಾಯಾಲಯಕ್ಕಿರುವ ಅಧಿಕಾರವನ್ನು ಚಲಾಯಿಸಿ, ತನಿಖೆಯನ್ನು ಕೈಗೊಳ್ಳಲು ಹಿರಿಯ ಮತ್ತು ಅನುಭವಿ ಅಧಿಕಾರಿಗಳನ್ನು ಒಳಗೊಂಡ 'ವಿಶೇಷ ತನಿಖಾ ತಂಡ'ವೊಂದನ್ನು ರಚಿಸುವುದು ಸೂಕ್ತ” ಎಂಬ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ.
ಸಾಂವಿಧಾನಿಕ ಸಂಸ್ಥೆಯೊಂದು ನಡೆಸಿದ ನೇಮಕಾತಿ ಪ್ರಕ್ರಿಯೆಯ ಪಾವಿತ್ರ್ಯತೆಗೆ ಸಂಬಂಧಿಸಿದಂತೆ ಆರೋಪಗಳಿದ್ದಾಗ ಮತ್ತು ಸಾವಿರಾರು ಆಕಾಂಕ್ಷಿಗಳ ವೃತ್ತಿಜೀವನದ ಮೇಲೆ ಪರಿಣಾಮ ಬೀರುವ ಸಂದರ್ಭದಲ್ಲ ನ್ಯಾಯಾಲಯವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸಾರ್ವಜನಿಕ ನೇಮಕಾತಿಯು ಕೇವಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯಲ್ಲ. ಅರ್ಹತೆಗೆ ಸೂಕ್ತ ಮನ್ನಣೆ ಸಿಗುತ್ತದೆ ಮತ್ತು ಸಮಾನತೆಯು ಆಡಳಿತದ ಮೂಲ ತತ್ವವಾಗಿರುತ್ತದೆ ಎಂಬ ಸಾಂವಿಧಾನಿಕ ಭರವಸೆಯೊಂದಿಗೆ, ಸರ್ಕಾರವು ನಾಗರಿಕರಿಗೆ ತನ್ನ ಬಾಗಿಲುಗಳನ್ನು ತೆರೆದುಕೊಡುವ ಪ್ರಕ್ರಿಯೆಯಾಗಿದೆ ಎಂದು ಹೇಳಿದೆ.
ಕುತಂತ್ರ, ಭ್ರಷ್ಟಾಚಾರ ಅಥವಾ ಪಕ್ಷಪಾತದ ಮೂಲಕ ಆ ಭರವಸೆಗೆ ಧಕ್ಕೆ ಉಂಟಾದರೆ, ಅದರಿಂದ ನಷ್ಟಕ್ಕೀಡಾಗುವುದು ಕೇವಲ ವಿಫಲ ಅಭ್ಯರ್ಥಿಯಲ್ಲ; ಬದಲಾಗಿ, ಸಾಂವಿಧಾನಿಕ ಆಡಳಿತ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ವಿಶ್ವಾಸವೇ ಕುಸಿಯುತ್ತದೆ. ಅಂತಿಮವಾಗಿ ಪ್ರಜಾಪ್ರಭುತ್ವವನ್ನೇ ಗಾಯಗೊಳಿಸುತ್ತವೆ. ಈ ವಂಚನೆಯು ಕೇವಲ ಹಿನ್ನಡೆ ಅನುಭವಿಸಿದ ಅಭ್ಯರ್ಥಿಗೆ ಎಸಗಿದ ವಂಚನೆಯಲ್ಲ; ಇದು ಸ್ವತಃ ಸಂವಿಧಾನಕ್ಕೇ ಎಸಗಿದ ವಂಚನೆಯಾಗಿದೆ. ಸರ್ಕಾರಿ ಕೆಲಸ ಪಡೆಯಲು ಎಲ್ಲಾ ನಾಗರಿಕರಿಗೆ ನೀಡಲಾದ ಸಮಾನ ಅವಕಾಶದ ಖಾತರಿಯನ್ನು ಈ ಹಗರಣ ಬಹಿರಂಗಪಡಿಸಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.