ಸುದ್ದಿಗಳು

ಕೆಪಿಎಸ್‌ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಮಧ್ಯಂತರ ರಕ್ಷಣೆ ನೀಡಲು ಹೈಕೋರ್ಟ್‌ ನಕಾರ

ಸಾಹುಕಾರ್‌ ವಿರುದ್ಧ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ಮಾರ್ಗಗಳ ತಡೆಗಟ್ಟುವಿಕೆ) ಕಾಯಿದೆ–2023ರ ಸೆಕ್ಷನ್‌ 318(3)ರ ಅಡಿಯಲ್ಲಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

Bar & Bench

ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪಗಳ ಪ್ರಕರಣದಲ್ಲಿ ಪ್ರಕರಣದಲ್ಲಿ ನನ್ನನ್ನು ವಿಚಾರಣೆಗೆ ಕರೆದು ಬಂಧನ ಮಾಡದಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸಿ ಮಧ್ಯಂತರ ರಕ್ಷಣೆ ನೀಡಬೇಕು ಎಂಬ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾಮನವಿಯನ್ನು ಪರಿಗಣಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ಮೌಖಿಕವಾಗಿ ನಿರಾಕರಿಸಿದೆ.

ಶಿವಶಂಕರಪ್ಪ ಸಾಹುಕಾರ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice S Vishwajith Shetty

ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ ಶ್ಯಾಮ್ ಅವರು “ಅರ್ಜಿದಾರರನ್ನು ಎರಡನೇ ಬಾರಿಗೆ ಅಮಾನತು ಮಾಡಲಾಗಿದೆ. ಹೀಗಾಗಿ, ಅವರು ಮತ್ತೆ ಅಧಿಕಾರ ವಹಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಿಚಾರಣೆಗೆ ಅರ್ಜಿದಾರರು ಈಗಾಗಲೇ ಸಹಕರಿಸಿದ್ದಾರೆ. ಆದರೆ, ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಿದೆ” ಎಂದು ಆಕ್ಷೇಪಿಸಿದರು.

“ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಇಲ್ಲ. ಅವರ ಸಂಬಂಧಿಯೊಬ್ಬರು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎಂಬ ಆರೋಪವಿದೆ. ಆದಾಗ್ಯೂ, ಅವರು ಅರ್ಜಿದಾರರ ಸಂಬಂಧಿ ಅಲ್ಲ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ, ಅರ್ಜಿದಾರರನ್ನು ಅನಗತ್ಯವಾಗಿ ಬಂಧಿಸುವ ಸಾಧ್ಯತೆಯಿದೆ. ಆದ್ದರಿಂದ ಮಧ್ಯಂತರ ರಕ್ಷಣೆ ನೀಡಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ತನಿಖೆ ಈಗಷ್ಟೇ ಆರಂಭವಾಗಿದೆ. ಇದೊಂದು ಗಂಭೀರ ಪ್ರಕರಣ. ಆರೋಪಿಯೊಬ್ಬರು ವಿದೇಶಕ್ಕೆ ಹಾರಲು ಸಜ್ಜಾಗಿದ್ದರು. ಅವರನ್ನು ದೆಹಲಿ ವಿಮಾನ ನಿಲ್ದಾಣದಿಂದ ಬಂಧಿಸಿ ಕರೆ ತರಲಾಗಿದೆ. ಅರ್ಜಿದಾರರ ವಿರುದ್ಧ ಇದೊಂದೇ ಅಲ್ಲ, ಇನ್ನೂ ಎರಡು ಪ್ರಕರಣಗಳಿವೆ. ವಿಚಾರಣೆ ಈಗಷ್ಟೇ ಆರಂಭವಾಗಿರುವ ಕಾರಣ ಯಾವುದೇ ರೀತಿಯ ಮಧ್ಯಂತರ ರಕ್ಷಣೆ ಸೂಕ್ತವಲ್ಲ” ಎಂದು ಪ್ರತಿಪಾದಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿದಾರರ ಪರ ವಕೀಲರ ಮಧ್ಯಂತರ ಮನವಿಯನ್ನು ಪರಿಗಣಿಸಲು ನಿರಾಕರಿಸಿ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ (ಗುರುವಾರ) ಮುಂದೂಡಿತು.

ಶಿವಶಂಕರಪ್ಪ ಸಾಹುಕಾರ್‌ ಅವರು ನಿರೀಕ್ಷಣಾ ಜಾಮೀನು ಕೋರಿ 52ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು 2026ರ ಆಗಸ್ಟ್‌ 11ರಂದು ವಜಾಗೊಳಿಸಿದ್ದ ನ್ಯಾಯಾಲಯವು ಪ್ರಕರಣದಲ್ಲಿನ ಆರೋಪಗಳು ಗಂಭೀರವಾಗಿವೆ. ಸದ್ಯ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಜಾಮೀನು ನೀಡಲಾಗದು ಎಂದು ಆದೇಶಿಸಿತ್ತು.

ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ–2023ರ ಸೆಕ್ಷನ್‌ 318(3) ಹಾಗೂ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ಮಾರ್ಗಗಳ ತಡೆಗಟ್ಟುವಿಕೆ) ಕಾಯಿದೆ–2023ರ ಸೆಕ್ಷನ್‌ 318(3)ರ ಅಡಿಯಲ್ಲಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.