Krishna Janmabhoomi - Shahi Idgah Dispute 
ಸುದ್ದಿಗಳು

ಕೃಷ್ಣ ಜನ್ಮಭೂಮಿ ವಿವಾದ: ಮುಸ್ಲಿಂ ಪಕ್ಷಕಾರರ ಆಕ್ಷೇಪ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಮೊದಲಿಗೆ ಆಕ್ಷೇಪ ಎತ್ತಿದ್ದ ಹಿಂದೂ ಪಕ್ಷಕಾರರು ಮಸೀದಿ ತೆರವುಗೊಳಿಸುವಂತೆ ಆಗ್ರಹಿಸಿದ್ದರು.

Bar & Bench

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಪಕ್ಷಕಾರರು ಸಲ್ಲಿಸಿರುವ 18 ಮೊಕದ್ದಮೆಗಳು ನಿರ್ವಹಣಾರ್ಹ ಎಂದು ಅಲಾಹಾಬಾದ್ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.

ದೇವತೆಯ ( ಹಿಂದೂ ದೈವ ಭಗವಾನ್ ಶ್ರೀ ಕೃಷ್ಣ ವಿರಾಜಮಾನ್‌) ವಾದ ಮಿತ್ರರು ಮತ್ತು ಹಿಂದೂ ಪಕ್ಷಕಾರರು ಸಲ್ಲಿಸಿದ್ದ ದಾವೆಗಳನ್ನು ಪೂಜಾ ಸ್ಥಳಗಳ ಕಾಯಿದೆ, ಲಿಮಿಟೇಷನ್‌ ಕಾಯಿದೆ ಹಾಗೂ ನಿರ್ದಿಷ್ಟ ಪರಿಹಾರ ಕಾಯಿದೆಗಳು ನಿರ್ಬಂಧಿಸುವುದರಿಂದ ಈ ದಾವೆಗಳ ನಿರ್ವಹಣಾರ್ಹತೆಯನ್ನು ಶಾಹಿ ಈದ್ಗಾ ಮಸೀದಿಯ ಆಡಳಿತ ಪ್ರಶ್ನಿಸಿತ್ತು.   

ಇಂದು, ನ್ಯಾಯಮೂರ್ತಿ ಮಾಯಾಂಕ್ ಕುಮಾರ್ ಜೈನ್ ಅವರು ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದರು.

ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಮೂಲದಾವೆಯಲ್ಲಿ ಆಕ್ಷೇಪ ಎತ್ತಿದ್ದ ಹಿಂದೂ ಪಕ್ಷಕಾರರು ಮಸೀದಿ  ತೆರವುಗೊಳಿಸುವಂತೆ ಆಗ್ರಹಿಸಿದ್ದರು.

ಕಳೆದ ವರ್ಷ ಡಿಸೆಂಬರ್ 14ರಂದು, ಶಾಹಿ-ಈದ್ಗಾ ಮಸೀದಿಯನ್ನು ಸಮೀಕ್ಷೆ ನಡೆಸುವ ಅರ್ಜಿಯನ್ನು ಹೈಕೋರ್ಟ್  ಪುರಸ್ಕರಿಸಿತ್ತು. ನಂತರ ಈ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಈ ಪ್ರಕರಣದ ವಿಚಾರಣೆಯನ್ನು 2023ರಲ್ಲಿ ವಿಚಾರಣಾ ನ್ಯಾಯಾಲಯದಿಂದ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.

ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ- 1991ರ ಅಡಿಯಲ್ಲಿ ಪ್ರಕರಣವನ್ನು ಸ್ವೀಕರಿಸಲು ಇರುವ ನಿರ್ಬಂಧ ಉಲ್ಲೇಖಿಸಿ ಸಿವಿಲ್ ನ್ಯಾಯಾಲ ಈ ಹಿಂದೆ ದಾವೆಯನ್ನು ವಜಾಗೊಳಿಸಿತ್ತು. ಆದರೆ, ಮಥುರಾ ಜಿಲ್ಲಾ ನ್ಯಾಯಾಲಯ ಈ ತೀರ್ಪನ್ನು ರದ್ದುಗೊಳಿಸಿತ್ತು.

ಭಗವಾನ್ ಕೃಷ್ಣನ ಭಕ್ತರಾಗಿ, ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ತಮ್ಮ ಮೂಲಭೂತ ಧಾರ್ಮಿಕ ಹಕ್ಕಿನಂತೆ ನಮಗೆ ದಾವೆ ಹೂಡುವ ಹಕ್ಕಿದೆ ಎಂದು ಮೇಲ್ಮನವಿದಾರರು ಪ್ರತಿಪಾದಿಸಿದ್ದರು.

ಮೇ 2022 ರಲ್ಲಿ ಮಥುರಾ ಜಿಲ್ಲಾ ನ್ಯಾಯಾಲಯವು ದಾವೆಯನ್ನು ನಿರ್ವಹಿಸಬಹುದು ಎಂದು ಅಭಿಪ್ರಾಯಪಟ್ಟಿತು ಮತ್ತು ದಾವೆಯನ್ನು ವಜಾಗೊಳಿಸಿದ್ದ ಸಿವಿಲ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತ್ತು.