ಶಾಹಿ ಈದ್ಗಾ - ಕೃಷ್ಣ ಜನ್ಮಭೂಮಿ ವಿವಾದಿತ ಸಂಕೀರ್ಣವು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದ್ದು, ಅದನ್ನು ಮಸೀದಿಯಾಗಿ ಬಳಸಲಾಗುವುದಿಲ್ಲ ಎಂಬ ಹಿಂದೂ ಪಕ್ಷಕಾರರು ಎತ್ತಿದ ಹೊಸ ವಾದವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ [ಶಾಹಿ ಈದ್ಗಾ ಆಡಳಿತ ಟ್ರಸ್ಟ್‌ನ ಸಮಿತಿ ವರ್ಸಸ್ ಭಗವಾನ್ ಶ್ರೀಕೃಷ್ಣ ವಿರಾಜ್‌ಮಾನ್ ಮಿತ್ರರು ಮತ್ತು ಇತರರು]. ಇದರೊಂದಿಗೆ, ಶಾಹಿ ಈದ್ಗಾ - ಕೃಷ್ಣ ಜನ್ಮಭೂಮಿ ವಿವಾದವು ಮತ್ತೊಂದು ಕುತೂಹಲಕಾರಿ ತಿರುವು ಪಡೆದುಕೊಂಡಿದೆ.
ಹಿಂದೂ ಪಕ್ಷಕಾರರು ತಮ್ಮ ಮನವಿಯನ್ನು ತಿದ್ದುಪಡಿ ಮಾಡಿ, ಎಎಸ್‌ಐ ಅನ್ನು ಪ್ರಕರಣದಲ್ಲಿ ಪಕ್ಷಕಾರನನ್ನಾಗಿ ಸೇರಿಸಲು ಅನುಮತಿಸಿದ್ದ ಅಲಾಹಾಬಾದ್ ಹೈಕೋರ್ಟ್‌ನ ಆದೇಶದ ವಿರುದ್ಧ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರ ಪೀಠವು ಹಿಂದೂ ಪಕ್ಷಕಾರರಿಗೆ ನೋಟಿಸ್ ಜಾರಿ ಮಾಡಿದೆ.
ಇಂದು ಮುಸ್ಲಿಂ ಪಕ್ಷಕಾರರು ಸಲ್ಲಿಸಿದದ ಮೇಲ್ಮನವಿಯ ವಿಚಾರಣೆಯು ಪೀಠದ ಮುಂದೆ ಬಂದಾಗ, "ಎಎಸ್‌ಐ ಸಂರಕ್ಷಿತ ಸ್ಥಳವನ್ನು ಮಸೀದಿಯಾಗಿ ಬಳಸಬಹುದೇ ಎಂಬ ಪ್ರಶ್ನೆ ನಮ್ಮ ಮುಂದೆ ಬಾಕಿ ಇದೆ. ಯಾವುದೇ ಪರಿಣಾಮಕಾರಿ ಮಧ್ಯಂತರ ಆದೇಶವನ್ನು ಹೊರಡಿಸಬಾರದು ಎಂದು ನಾವು ಹೇಳಿದ್ದೆವು, ನೀವು ಈ ವಿಚಾರವನ್ನು ಹೈಕೋರ್ಟ್‌ಗೆ ಹೇಳಿಲ್ಲ. ಅರ್ಹತೆಯ ಆಧಾರದ ಮೇಲೆ ಇದನ್ನು ಬೇರೆ ವಿಷಯದಲ್ಲಿ ಪರಿಗಣಿಸಬೇಕಾಗುತ್ತದೆ" ಎಂದು ಸುಪ್ರೀಂ ಕೋರ್ಟ್ ಹೇಳಿತು. ಹಿಂದೂ ಪಕ್ಷಕಾರರ ತಿದ್ದುಪಡಿ ಅರ್ಜಿಯನ್ನು ಅನುಮತಿಸಿದ ಹೈಕೋರ್ಟ್ ಆದೇಶವು ಪ್ರಾಥಮಿಕವಾಗಿ ಸರಿಯಾಗಿದೆ ಎಂದು ಸಹ ನ್ಯಾಯಪೀಠ ತಿಳಿಸಿತು.
ಎಎಸ್‌ಐ ಸಂರಕ್ಷಿತ ಸ್ಥಳವನ್ನು ಮಸೀದಿಯಾಗಿ ಪೂಜೆಗೆ ಬಳಸಲಾಗುವುದಿಲ್ಲ. ಅಲ್ಲದೆ, ಅಂತಹ ಸ್ಮಾರಕಗಳಿಗೆ ಪೂಜಾ ಸ್ಥಳಗಳ ಕಾಯ್ದೆ ಅನ್ವಯಿಸುವುದಿಲ್ಲ ಎಂಬ ವಾದವನ್ನು ಆಧರಿಸಿ ಹಿಂದೂ ಪಕ್ಷಕಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್,"ನೀವು ವಾದವನ್ನು ತಿದ್ದುಪಡಿ ಮಾಡುವ ಮತ್ತು ಪಕ್ಷಕಾರರನ್ನಾಗಿ ಸೇರ್ಪಡೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದೀರಿ. ಇದು ಯಾವುದೇ ಪಕ್ಷಗಳಿಗೆ ಪೂರ್ವಾನ್ವಯವಾಗುತ್ತದೆಯೇ, ಇಲ್ಲವೇ ಎನ್ನುವುದು ಪ್ರತ್ಯೇಕ ವಿಷಯ. ಅವರು ಅರ್ಜಿಯನ್ನು ತಿದ್ದುಪಡಿ ಮಾಡಬಹುದು ಹಾಗೂ ಪೂಜಾ ಸ್ಥಳಗಳ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಬಹುದು. ಹಾಗಾಗಿಯೇ, ಆಕ್ಷೇಪಾರ್ಹ ಆದೇಶ ಸರಿಯಾಗಿದೆ. ಇದು ಹೊಸ ಪ್ರಕರಣವಲ್ಲ. ನೀವು ಹೊಸದೊಂದು ಸಮರ್ಥನೆಯನ್ನು ಎತ್ತಿದಾಗ ಅವರು ಅದನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದಾರೆ" ಎಂದು ಅವಲೋಕಿಸಿತು.
ಅಂತಿಮವಾಗಿ, ವಿವಾದಕ್ಕೆ ಸಂಬಂಧಿಸಿದ ಇತರ ಸಂಬಂಧಿತ ವಿಷಯಗಳೊಂದಿಗೆ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 8 ರಂದು ನಡೆಸುವುದಾಗಿ ನ್ಯಾಯಾಲಯ ಹೇಳಿತು.
ಹಿಂದೂ ಪಕ್ಷಕಾರರು ಎಎಸ್‌ಐ ಅನ್ನು ಪ್ರಕರಣದಲ್ಲಿ ಕಕ್ಷಿದಾರನನ್ನಾಗಿ ಮಾಡಲು ಅಲಾಹಾಬಾದ್ ಹೈಕೋರ್ಟ್ ಮುಂದೆ ಅರ್ಜಿ ದಾಖಲಿಸಿದ್ದರು. ಅಲ್ಲದೆ, ತಾವು ಆರಂಭದಲ್ಲಿ ಸಲ್ಲಿಸಿದ ದೂರಿಗೆ ತಿದ್ದುಪಡಿಯನ್ನು ಮಾಡಲು ಸಹ ಕೋರಿದ್ದರು. ಇದಕ್ಕೆ ನ್ಯಾಯಾಲಯವು ಅನುಮತಿಸಿತ್ತು.
1920ರಲ್ಲಿ ಒಕ್ಕೂಟ ಪ್ರಾಂತ್ಯದ ಲೆಫ್ಟಿನೆಂಟ್ ಗವರ್ನರ್ ಹೊರಡಿಸಿದ ಅಧಿಸೂಚನೆಯ ಮೂಲಕ ಮಸೀದಿಯನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಪ್ರಾಚೀನ ಸ್ಮಾರಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಹೇಳಲಾಗಿದೆ.