Krishna Janmabhoomi Case  
ಸುದ್ದಿಗಳು

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮೊಕದ್ದಮೆ ವರ್ಗಾವಣೆ: ಅಲಾಹಾಬಾದ್ ಹೈಕೋರ್ಟ್ ತೀರ್ಪಿನ ಔಚಿತ್ಯ ಪ್ರಶ್ನಿಸಿದ ಸುಪ್ರೀಂ

ಪ್ರಕರಣ ಆಲಿಸುವ ಮೂಲ ಅಧಿಕಾರ ಅಲಾಹಾಬಾದ್ ಹೈಕೋರ್ಟ್‌ಗೆ ಇಲ್ಲ. ಸಿವಿಲ್ ನ್ಯಾಯಾಲಯದ ಮೊಕದ್ದಮೆಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರವೇ ಹೈಕೋರ್ಟ್ ತನಗೆ ವರ್ಗಾಯಿಸಿಕೊಳ್ಳಬಹುದು ಎಂದ ಪೀಠ.

Bar & Bench

ಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಮೊಕದ್ದಮೆಗಳನ್ನು ವಿಚಾರಣಾ ನ್ಯಾಯಾಲಯದಿಂದ ತನಗೆ ವರ್ಗಾಯಿಸಿಕೊಂಡ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಔಚಿತ್ಯವನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ [ ಶಾಹಿ ಈದ್ಗಾ ಆಡಳಿತ  ಸಮಿತಿ ಟ್ರಸ್ಟ್‌ ಮತ್ತು ಭಗವಾನ್‌ ಶ್ರೀ ಕೃಷ್ಣ ವಿರಾಜಮಾನ್‌ನ ವಾದ ಮಿತ್ರ ಇನ್ನಿತರರ ನಡುವಣ ಪ್ರಕರಣ].

ಪ್ರಕರಣ ಆಲಿಸುವ ಮೂಲ ಅಧಿಕಾರ ಅಲಾಹಾಬಾದ್‌ ಹೈಕೋರ್ಟ್‌ಗೆ ಇಲ್ಲ. ಸಿವಿಲ್ ನ್ಯಾಯಾಲಯದ ಮೊಕದ್ದಮೆಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರವೇ ಹೈಕೋರ್ಟ್‌ ತನಗೆ ವರ್ಗಾಯಿಸಿಕೊಳ್ಳಬಹುದು ಎಂದು ಸಿಜೆಐ ಸಂಜೀವ್‌ ಖನ್ನಾ ಮತ್ತು ನ್ಯಾ. ಪಿವಿ ಸಂಜಯ್ ಕುಮಾರ್ ಅವರಿದ್ದ ಪೀಠ ತಿಳಿಸಿದೆ.

ಮೊಕದ್ದಮೆಗಳನ್ನು ವಿಚಾರಣಾ ನ್ಯಾಯಾಲಯದಿಂದ ಹೈಕೋರ್ಟ್‌ಗೆ ವರ್ಗಾಯಿಸಲು ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಪುರಸ್ಕರಿಸಿತ್ತು. ಈ ಆದೇಶದ ವಿರುದ್ಧ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮನವಿಯ ವಿಚಾರನೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

ಹೈಕೋರ್ಟ್‌ ನ್ಯಾಯಮೂರ್ತಿ  ಅರವಿಂದ್ ಕುಮಾರ್ ಮಿಶ್ರಾ  ಅವರು ಮೊಕದ್ದಮೆಯನ್ನು ಸಿವಿಲ್ ನ್ಯಾಯಾಲಯದಿಂದ ಹೈಕೋರ್ಟ್‌ಗೆ ವರ್ಗಾಯಿಸುವ ಆದೇಶ ಹೊರಡಿಸಿದ್ದರು. ಈ ಆದೇಶದ ವಿರುದ್ಧ ಹೈಕೋರ್ಟ್‌ನ ವಿಸ್ತೃತ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದೇ ಎಂದು ಇಂದು ಕೇಳಿದ ಅದು ಚಳಿಗಾಲದ ರಜೆ ಬಳಿಕ ಪ್ರಕರಣ ಆಲಿಸುವುದಾಗಿ ತಿಳಿಸಿತು.  

ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದಂತೆ ಶಾಹಿ-ಈದ್ಗಾ ಮಸೀದಿ ವಿವಾದವನ್ನು ಪರಿಶೀಲಿಸಲು ನ್ಯಾಯಾಲಯದ ಆಯುಕ್ತರನ್ನು ನೇಮಿಸುವಂತೆ ಕೋರಿ ಹಿಂದೂ ದೇವತೆ, ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಮತ್ತು ಇತರ ಏಳು ಹಿಂದೂ ಪಕ್ಷಗಳ ಪರವಾಗಿ ಸಲ್ಲಿಸಿದ ಅರ್ಜಿಯನ್ನು ಕಳೆದ ವರ್ಷ ಡಿಸೆಂಬರ್ 14 ರಂದು ಹೈಕೋರ್ಟ್  ಮಾನ್ಯ ಮಾಡಿತ್ತು.

ಶಾಹಿ ಈದ್ಗಾ ಮಸೀದಿಯನ್ನು (ಮಸೀದಿ) ಕೃಷ್ಣ ಜನ್ಮಭೂಮಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಹಿಂದೂ ಪಕ್ಷಕಾರರು ಸಿವಿಲ್ ನ್ಯಾಯಾಲಯದ ಮುಂದೆ ಮೂಲ ದಾವೆ ಹೂಡಿದ್ದರು.