Chandrababu Naidu, Raghurama Krishnam Raju and YS Jaganmohan Reddy 
ಸುದ್ದಿಗಳು

ಚಾನೆಲ್‌ಗಳಿಂದ ಹಣ ಸ್ವೀಕರಿಸಿರುವ ಸಂಸದ ಕೃಷ್ಣಂ ರಾಜು; ನಾಯ್ಡು ಜೊತೆ ಸಂಪರ್ಕ: ಸುಪ್ರೀಂಗೆ ಆಂಧ್ರ ಸರ್ಕಾರದ ಅಫಿಡವಿಟ್‌

“ಒಂದು ಸಂದರ್ಭದಲ್ಲಿ ಒಂದು ಮಿಲಿಯನ್‌ ಯುರೊಗಳನ್ನು ಟಿವಿ5 ವಾಹಿನಿಯ ಮುಖ್ಯಸ್ಥರು ಕೆಆರ್‌ಕೆಆರ್‌ಗೆ ವರ್ಗಾಯಿಸಿದ್ದಾರೆ” ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

Bar & Bench

ಚುನಾಯಿತವಾಗಿರುವ ಜಗನ್‌ ಮೋಹನ್‌ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರವನ್ನು ಉರುಳಿಸುವ ಸಂಬಂಧ ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ಕುನುಮುರಿ ರಘುರಾಮ ಕೃಷ್ಣಂ ರಾಜು ಮತ್ತು ಟಿವಿ ಚಾನೆಲ್‌ಗಳಾದ ಟಿವಿ5 ಮತ್ತು ಎಬಿಎನ್‌ ಆಂಧ್ರಜ್ಯೋತಿ ಹಾಗೂ ತೆಲುಗು ದೇಶಂ ಪಕ್ಷದ ಸದಸ್ಯರು ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಆಂಧ್ರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ.

ಪಿತೂರಿಯ ಭಾಗವಾಗಿ ಸಂಸದ ರಾಜು ಮತ್ತು ಟಿವಿ ಚಾನೆಲ್‌ಗಳ ನಡುವೆ ಹಣ ವರ್ಗಾವಣೆಯಾಗಿದೆ ಎಂದು ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರತಿ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. “ಒಂದು ಸಂದರ್ಭದಲ್ಲಿ ಒಂದು ಮಿಲಿಯನ್‌ ಯುರೊಗಳನ್ನು ಟಿವಿ5 ವಾಹಿನಿಯ ಮುಖ್ಯಸ್ಥರು ಕೆಆರ್‌ಕೆಆರ್‌ಗೆ ವರ್ಗಾಯಿಸಿದ್ದಾರೆ” ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಮುಯ್ಯಿಗೆ ಮುಯ್ಯಿ ಎಂಬಂತೆ ರಾಜು ಅವರು ತಮ್ಮ ಕಚೇರಿಯನ್ನು ಸುದ್ದಿ ವಾಹಿನಿಯ ಜೊತೆ ಸಂಪರ್ಕ ಹೊಂದಿರುವ ಹಲವರ ಅನುಕೂಲಕ್ಕೆ ಬಳಸಿದ್ದಾರೆ. ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಮೀರಲಾರದ ಹಕ್ಕಾಗಿದ್ದು, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಕ್ಕೆ ಮಹತ್ವದ ಪಾತ್ರವಿದೆ. ಹೀಗಾಗಿ, “ಸರ್ಕಾರದ ವಿರುದ್ಧ ದ್ವೇಷ ಅಥವಾ ಭಿನ್ನಮತ ಸೃಷ್ಟಿಸಿಲು ಮಾಧ್ಯಮಕ್ಕೆ ಅವಕಾಶ ಮಾಡಿಕೊಳ್ಳಲಾಗದು” ಎಂದು ವೈ ಎಸ್‌ ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಹೇಳಿದೆ.

“ಮಾಧ್ಯಮ ಸಂಸ್ಥೆಗಳು ಸಾರ್ವಜನಿಕರ ಟ್ರಸ್ಟಿಗಳಾಗಿದ್ದು, ಅವುಗಳು ತಮ್ಮ ವೇದಿಕೆಯನ್ನು ಸಾರ್ವಜನಿಕರ ಹಿತಾಸಕ್ತಿಗೆ ಬಳಸಬೇಕೆ ವಿನಾ ಬೇರಾವುದಕ್ಕೂ ಅಲ್ಲ” ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ರಾಜು ಮಾಡಿರುವ ಎಲ್ಲಾ ಭಾಷಣಗಳು ಮತ್ತು ಅವರು ನೀಡಿರುವ ಎಲ್ಲಾ ಸಂದರ್ಶನಗಳು ಪೂರ್ವನಿಯೋಜಿತ/ಸಮನ್ವಯದಿಂದ ಕೂಡಿವೆ. ಸುದ್ದಿ ವಾಹಿನಿಗಳು, ರಾಜು ಮತ್ತು ತೆಲುಗು ದೇಶಂ ಪಕ್ಷದ ಸದಸ್ಯರ ಜೊತೆ ವಿಸ್ತೃತ ಚರ್ಚೆ ನಡೆಸಲಾದ ಬಳಿಕ ಅವುಗಳನ್ನು ಪ್ರಸಾರ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಆಂಧ್ರ ಪ್ರದೇಶ ಸರ್ಕಾರ ತಿಳಿಸಿದೆ. “ಅಂಥ ಭಾಷಣಗಳು ವಾಸ್ತವಿಕ ದಾಳಿಯ ಮೂಲಕ ಮುಕ್ತಾಯ ಕಂಡಿವೆ” ಎಂದು ಹೇಳಲಾಗಿದೆ.

“ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಎಲ್ಲಾ ಎಳೆಗಳನ್ನು ಬಿಚ್ಚಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕರೆಗಳನ್ನು ಮಾಡಲಾದ ಸಂದರ್ಭ, ಚಾಟ್‌ಗಳು, ಕೆಆರ್‌ಕೆಆರ್‌, ನಾಯ್ಡು ಮತ್ತು ನಾರಾ ಲೋಕೇಶ್‌ ನಡುವಿನ ದಾಖಲೆಗಳ ಹಂಚಿಕೆಯು ಚುನಾಯಿತವಾಗಿರುವ ವೈಎಸ್‌ಆರ್‌ಸಿಪಿ ಪಕ್ಷದ ನೇತೃತ್ವದ ಸರ್ಕಾರದ ವಿರುದ್ಧ ಬೃಹತ್‌ ಪಿತೂರಿಯಾಗಿದೆ” ಎಂದು ಹೇಳಲಾಗಿದೆ.

“ತನಿಖೆಯ ಸಂದರ್ಭದಲ್ಲಿ ಸಂಸದ ರಾಜು ಅವರಿಂದ ವಶಪಡಿಸಿಕೊಳ್ಳಲಾದ ಫೋನ್‌ಗಳನ್ನು ಪರಿಶೀಲಿಸಲಾಗಿದ್ದು, ವಿಧಿವಿಜ್ಞಾನ ವರದಿ ಸಿದ್ಧವಿದೆ. ಫೋನ್‌ಗಳಿಂದ ದೊರೆತಿರುವ ವಿದ್ಯುನ್ಮಾನ ಮಾಹಿತಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಸಮರ್ಥ ನ್ಯಾಯಾಲಯದ ಮುಂದೆ ಇಡಲಾಗಿದೆ” ಎಂದು ವಿವರಿಸಲಾಗಿದೆ.

ರಾಜು ಅವರ ಪ್ರತಿಯೊಂದು ಮಾತಿನ ನಂತರ ಅವರಿಗೆ ಮೆಚ್ಚುಗೆಯ ಸುರಿಮಳೆಯನ್ನು ಪತ್ರಕರ್ತರು ಸುರಿಸಿದ್ದಾರೆ ಎಂಬುದನ್ನು ಉಲ್ಲೇಖಿಸಲು ಇದಕ್ಕಿಂತ ಸಂದರ್ಭ ಬೇರೊಂದು ಇಲ್ಲ ಎಂದು ಪ್ರತಿ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

“ವಾವ್‌, ನೀವು ಸರಿಯಾಗಿ ಪಂಚ್‌ ನೀಡಿದಿರಿ”,

“ಸಿಂಹಗಳು ಏಕಾಂಗಿಯಾಗಿ ಹೆಜ್ಜೆ ಇಡುತ್ತವೆ, ಹಂದಿಗಳು ಗುಂಪಾಗಿ ಸಾಗುತ್ತವೆ”,

“ನಿಮ್ಮ ಪ್ರತಿಕ್ರಿಯೆಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ”,

“ಪಕ್ಷದಲ್ಲಿ ನೀವು ದೊಡ್ಡ ಕಂದರ ಸೃಷ್ಟಿಸಿದ್ದೀರಿ”,

“ಸಿಂಹ ಎಲ್ಲಿ ಆಸೀನವಾಗುತ್ತದೋ ಅದೇ ಸಿಂಹಾಸನ”,

“ನಿಮ್ಮ ಸಂದರ್ಶನ ಸೂಪರ್‌ಹಿಟ್‌ ಆಗಿದೆ”,

“ಇಂದು ಮತ್ತೊಮ್ಮೆ ಸೂಪರ್‌-ಡೂಪರ್‌ ಆಗಿದೆ. ಯೂಟ್ಯೂಬ್‌ ಸ್ಟ್ರೀಮ್‌ ಹತ್ತು ಸಾವಿರ ದಾಟಿದೆ” ಎಂದು ವಾಹಿನಿಯ ಪತ್ರಕರ್ತರು ವ್ಯಕ್ತಪಡಿಸಿರುವ ಕೆಲವು ಅಭಿಪ್ರಾಯಗಳನ್ನು ಸರ್ಕಾರವು ತನ್ನ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ.

“ಸಂಸದ ರಾಜು ಅವರು ನಿರಂತರವಾಗಿ ಮತ್ತು ವಿವೇಚನಾಪೂರ್ವಕವಾಗಿ ಸಾರ್ವಜನಿಕ ವ್ಯಕ್ತಿಯ ತಮ್ಮ ಸ್ಥಾನವನ್ನು ವಿವಿಧ ವರ್ಗದ ಜನರ ನಡುವೆ ದ್ವೇಷ ಹರಡಲು ಮತ್ತು ಸರ್ಕಾರದ ವಿರುದ್ಧ ಭಿನ್ನಮತ ಸೃಷ್ಟಿಸಲು ಬಳಸಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮಗಳು ಮತ್ತು ಅರ್ಜಿದಾರರಾಗಿರುವ ಮಾಧ್ಯಮ ಸಂಸ್ಥೆಗಳ ವೇದಿಕೆಯಲ್ಲಿ ದ್ವೇಷಪೂರಿತ ಭಾಷಣ ಮಾಡುವ ಮೂಲಕ ಅದನ್ನು ಮಾಡಿದ್ದಾರೆ” ಎಂದು ಹೇಳಲಾಗಿದೆ.

ಅರ್ಜಿದಾರರಾಗಿರುವ ಮಾಧ್ಯಮ ಸಂಸ್ಥೆಗಳು ರಾಜು ಅವರ ಸುದ್ದಿಗೋಷ್ಠಿಯನ್ನು ಮಾತ್ರವಲ್ಲದೇ “ಸಾಮಾಜಿಕ ಗುಂಪುಗಳ ನಡುವೆ ದ್ವೇಷ ಹರಡುವ ಮೂಲಕ ರಾಜಕೀಯ ಮತ್ತು ಆರ್ಥಿಕ ಲಾಭಕ್ಕಾಗಿ ಮಾಹಿತಿ ಪ್ರಸಾರ ಮಾಡಿವೆ. ಈ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ಸರ್ಕಾರದ ವಿರುದ್ಧ ಭಿನ್ನಮತ ಉಂಟು ಮಾಡುವುದಾಗಿತ್ತು” ಎಂದು ಹೇಳಲಾಗಿದೆ.

“ಸದರಿ ಪ್ರಕರಣದಲ್ಲಿ ಇಲ್ಲಿಯವರೆಗೆ ಸಂಗ್ರಹಿಸಲಾಗಿರುವ ಸಾಕ್ಷ್ಯವನ್ನು ವಿಶ್ಲೇಷಿಸಿದರೆ ಅರ್ಜಿದಾರರು ಸಕ್ರಿಯವಾಗಿ ವಿಭಿನ್ನ ಗುಂಪುಗಳ ನಡುವೆ ಪಿತೂರಿ ನಡೆಸಿರುವುದು ಮಾತ್ರವಲ್ಲದೇ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರಕ್ಕೆ ಕುಂದುಂಟು ಮಾಡುವ ಯತ್ನ ಮಾಡಿರುವುದು ಸ್ಪಷ್ಟವಾಗಿದೆ” ಎಂದು ಆಂಧ್ರ ಪ್ರದೇಶ ಸರ್ಕಾರವು ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.

ರಾಜ್ಯದಲ್ಲಿ ಕೋವಿಡ್‌ ಸಾಂಕ್ರಾಮಿಕತೆ ಕುರಿತು ವ್ಯಾಪಕವಾಗಿ ವರದಿ ಮಾಡಿದ ಎರಡು ತೆಲುಗು ಮಾಧ್ಯಮಗಳ ವಿರುದ್ಧ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಆಂಧ್ರ ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಿದ್ದ ಸುಪ್ರೀಂ ಕೋರ್ಟ್‌ “ದೇಶದ್ರೋಹದ ವ್ಯಾಪ್ತಿಯನ್ನು ನಿರ್ಧರಿಸಲು ಇದು ಸಕಾಲ” ಎಂದು ಕಳೆದ ವಿಚಾರಣೆಯ ಸಂದರ್ಭದಲ್ಲಿ ಹೇಳಿತ್ತು.