ರಾಜ್ಯದಲ್ಲಿ ಕಾನೂನು ಪದವಿ ಪಡೆದು ವಕೀಲಿಕೆ ನಡೆಸಲು ಸನ್ನದು ಮಾಡಿಸಿಕೊಂಡ ನಂತರ ಸರ್ಕಾರಿ, ಅರೆ ಸರ್ಕಾರಿ, ನ್ಯಾಯಾಂಗ ಇಲಾಖೆ ಮತ್ತು ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿರುವವರು ತಮ್ಮ ಸನ್ನದು ಅಮಾನತು ಮಾಡಿಕೊಳ್ಳಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ ಬಿಸಿ) ಜೂನ್ 29ರವರೆಗೆ ಕಾಲಾವಕಾಶ ವಿಸ್ತರಿಸಿದೆ.
ರಾಜ್ಯದಲ್ಲಿ ಹಲವು ವಕೀಲರು ಪರಿಷತ್‌ನಲ್ಲಿ ಸನ್ನದು ತೆಗೆದುಕೊಂಡು ನಂತರ ಸರ್ಕಾರಿ, ಅರೆ ಸರ್ಕಾರಿ, ಸಹಾಯಕ ಅಭಿಯೋಜಕರಾಗಿ, ನ್ಯಾಯಾಂಗ ಇಲಾಖೆ ಮತ್ತು ಖಾಸಗಿ ಕಂಪನಿಯ ನೌಕರರಾಗಿ ನೇಮಕಗೊಂಡಿರುತ್ತಾರೆ. ಹೋಟೆಲ್ ಉದ್ಯಮ, ಪೆಟ್ರೋಲ್ ಬಂಕ್, ಬಾರ್ ಮತ್ತು ರೆಸ್ಟೋರೆಂಟ್, ಲಾಡ್ಜ್, ರಿಯಲ್ ಎಸ್ಟೇಟ್ ಸೇರಿದಂತೆ ಇನ್ನಿತರ ಲಾಭದಾಯಕ ವ್ಯಾಪಾರ ವ್ಯವಹಾರಗಳ ತೊಡಗಿಸಿಕೊಂಡಿದ್ದಾರೆ. ಅಂತಹವರು ಸನ್ನದು ಅಮಾನತು ಮಾಡಿಕೊಳ್ಳಲು ಮೇ 31ರವರೆಗೆ ಕಾಲಾವಕಾಶ ನೀಡಲಾಗಿತ್ತು ಎಂದು ಕೆಎಸ್‌ಬಿಸಿ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ ಅಂತ್ಯದವರಗೆ ಅನೇಕರು ತಮ್ಮ ಸನ್ನದು ಅಮಾನತು ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಅನೇಕರು ಸನ್ನದು ಅಮಾನತು ಮಾಡಿಕೊಳ್ಳಬೇಕಿದೆ. ವಕೀಲರ ಕಾಯಿದೆ 1961ರ ಪ್ರಕಾರ ವಕೀಲಿಕೆ ತೊರೆದು ಅನ್ಯ ಉದ್ಯೋಗದಲ್ಲಿ ತೊಡಗಿಸಿಕೊಂಡವರು ಆರು ತಿಂಗಳಲ್ಲಿ ತಮ್ಮ ಸನ್ನದು ಅನ್ನು ಅಮಾನತು ಮಾಡಿಕೊಳ್ಳಬೇಕಿದೆ. ಆದ್ದರಿಂದ, ಜೂನ್ 29ರವರೆಗೆ ಕಾಲಾವಕಾಶ ನೀಡಲಾಗಿದೆ. ಜೂನ್ 14, 15, 21, 22, 28 ಮತ್ತು 29ರಂದು ಪರಿಷತ್ ಕಚೇರಿಗೆ ಭೇಟಿ ನೀಡಿ, ಏಕೆ ಈವರೆಗೂ ಸನ್ನದು ಅಮಾನತು ಮಾಡಿಕೊಂಡಿಲ್ಲ ಎಂಬುದಕ್ಕೆ ಕಾರಣ ವಿವರಿಸಿ ಪ್ರಮಾಣ ಪತ್ರದೊಂದಿಗೆ ಸನ್ನದು ಅಮಾನತಿಗೆ ಅರ್ಜಿ ಸಲ್ಲಿಸಬಹುದು. ಒಂದೊಮ್ಮೆ ಜೂನ್ 29ರೊಳಗೆ ಸನ್ನದು ಅಮಾನತು ಮಾಡಿಕೊಳ್ಳಲು ವಿಫಲವಾದರೆ, ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ಮಿಟ್ಟಲಕೋಡ ಎಚ್ಚರಿಕೆ ನೀಡಿದ್ದಾರೆ.