KSBC and Karnataka HC 
ಸುದ್ದಿಗಳು

ಕೆಎಸ್‌ಬಿಸಿ ಚುನಾವಣೆ: ಭಾರತೀಯ ವಕೀಲರ ಪರಿಷತ್‌, ಕೆಎಸ್‌ಬಿಸಿಗೆ ಹೈಕೋರ್ಟ್‌ ತುರ್ತು ನೋಟಿಸ್‌

ಹೊಸದಾಗಿ 2023ರ ಜೂನ್‌ನಲ್ಲಿ ಚುನಾವಣೆ ನಡೆಸುವ ಬದಲಿಗೆ ಬಿಸಿಐಯು 2023ರ ಜೂನ್‌ 23ರಂದು ಸ್ವೇಚ್ಛೆಯಿಂದ ಕೆಎಸ್‌ಬಿಸಿ ಅಧಿಕಾರಾವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Bar & Bench

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ಚುನಾವಣೆ ನಡೆಸಲು ಆದೇಶಿಸುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಹಾಗೂ ಕೆಎಸ್‌ಬಿಸಿಗೆ ಹೈಕೋರ್ಟ್‌ ಬುಧವಾರ ತುರ್ತು ನೋಟಿಸ್‌ ಜಾರಿ ಮಾಡಿದೆ.

2023ರ ಜೂನ್‌ 23ರಂದು ಕೆಎಸ್‌ಬಿಸಿಯ ಅಧಿಕಾರಾವಧಿಯನ್ನು ಎರಡು ವರ್ಷಗಳಿಗೆ ಸ್ವೇಚ್ಛೆಯಿಂದ ವಿಸ್ತರಿಸಿ ಬಿಸಿಐ ಮಾಡಿರುವ ಆಕ್ಷೇಪಾರ್ಹವಾದ ಆದೇಶ ಹಿಂಪಡೆಯವಂತೆ ಕೋರಿ 2023ರ ಡಿಸೆಂಬರ್‌ 6ರಂದು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಮತ್ತು ಬಿಸಿಐ ಆಕ್ಷೇಪಾರ್ಹವಾದ ಅಧಿಸೂಚನೆ ವಜಾ ಮಾಡುವಂತೆ ಕೋರಿ ಬೆಂಗಳೂರಿನ ವಕೀಲ ರಹಮತುಲ್ಲಾ ಕೊತ್ವಾಲ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

2018ರ ಮಾರ್ಚ್‌ 27ರಂದು ಕೆಎಸ್‌ಬಿಸಿ ಚುನಾವಣೆ ನಡೆದಿತ್ತು. ವಕೀಲ ಕಾಯಿದೆ 1961ರ ಸೆಕ್ಷನ್‌ 8ರ ಅನ್ವಯ 2023ರ ಜೂನ್‌ ವೇಳೆಗೆ ಕೆಎಸ್‌ಬಿಸಿಯ ಐದು ವರ್ಷಗಳ ಅವಧಿ ಮುಗಿದಿತ್ತು. ಆದರೆ, ಹೊಸದಾಗಿ 2023ರ ಜೂನ್‌ನಲ್ಲಿ ಚುನಾವಣೆ ನಡೆಸುವ ಬದಲಿಗೆ ಬಿಸಿಐಯು 2023ರ ಜೂನ್‌ 23ರಂದು ಸ್ವೇಚ್ಛೆಯಿಂದ ಕೆಎಸ್‌ಬಿಸಿ ಅಧಿಕಾರಾವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ. 2015ರಲ್ಲಿ ಆರಂಭವಾಗಿರುವ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಲು 18 ತಿಂಗಳು ಮತ್ತು ಹೊಸದಾಗಿ ಚುನಾವಣೆ ನಡೆಸಲು ಆರು ತಿಂಗಳು ಕಾಲಾವಕಾಶವನ್ನು ಬಿಸಿಐ ನೀಡಿತ್ತು.

ಈ ಹಿನ್ನೆಲೆಯಲ್ಲಿ 2023ರ ನವೆಂಬರ್‌ 25ರಂದು ಕೆಎಸ್‌ಬಿಸಿಯು ಸರ್ಟಿಫಿಕೇಟ್‌ ಆಫ್‌ ಪ್ರಾಕ್ಟೀಸ್‌ (ಸಿಒಪಿ) ಅರ್ಜಿ ಸಲ್ಲಿಸಲು 2023ರ ಡಿಸೆಂಬರ್‌ 31 ಕೊನೆಯ ದಿನ ಎಂದು ಸುತ್ತೋಲೆ ಹೊರಡಿಸಿತ್ತು. ಇದರಿಂದ ವಕೀಲರ ಹಿತರಕ್ಷಣೆ ಮಾಡುವ ಉದ್ದೇಶದಿಂದ 2023ರ ಜೂನ್‌ 23ರ ಆಕ್ಷೇಪಾರ್ಹವಾದ ಅಧಿಸೂಚನೆ ಹಿಂಪಡೆಯುವಂತೆ ಕೋರಿ ಬಿಸಿಐಗೆ ಮತ್ತು ಅದರ ಪ್ರತಿಯನ್ನು ಕೆಎಸ್‌ಬಿಸಿಗೆ ಕಳುಹಿಸಿಕೊಡಲಾಗಿತ್ತು. ಇದಕ್ಕೆ ಬಿಸಿಐ ಕಿಮ್ಮತ್ತು ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೆಟ್ಟಿಲೇರಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಈ ನಡುವೆ ಕೆಎಸ್‌ಬಿಸಿಯು ಸಿಒಪಿ ಸಲ್ಲಿಸಲು ಮಾರ್ಗಸೂಚಿ ರೂಪಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.