ರಾಜ್ಯ ವಕೀಲರ ಪರಿಷತ್‌ನ ಹಣ ದುರುಪಯೋಗದ ಆರೋಪದಡಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್ ಎಸ್ ಮಿಟ್ಟಲಕೋಡ್ ಅವರ ವಕೀಲಿಕೆಯ ಸನ್ನದು ಮತ್ತು ಸದಸ್ಯತ್ವವನ್ನು ಅಮಾನತಿನಲ್ಲಿ ಇರಿಸಿ ಆದೇಶಿಸಲಾಗಿದೆ.
ಪರಿಷತ್ ಸದಸ್ಯರು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ವಿಶೇಷಾಧಿಕಾರ ಸಮಿತಿ ವಕೀಲರ ಕಾಯಿದೆ–1961ರ ಸೆಕ್ಷನ್ 35ರ ಅಡಿಯಲ್ಲಿ ಅಮಾನತಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಅನುಗುಣವಾಗಿ ಸಿದ್ದಲಿಂಗಪ್ಪ ಶೇಖರಪ್ಪ ಮಿಟ್ಟಲಕೋಡ್ ಅವರನ್ನು ತಕ್ಷಣದಿಂದ ಅಮಾತಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಅಧ್ಯಕ್ಷ ವಿ ಡಿ ಕಾಮರಡ್ಡಿ ಶನಿವಾರ ಅಧಿಸೂಚನೆ ಹೊರಡಿಸಿದ್ದಾರೆ.
‘ಶಿಸ್ತು ಸಮಿತಿ ಪದಾಧಿಕಾರಿಗಳಾದ ಅಧ್ಯಕ್ಷ ಟಿ ನಾರಾಯಣ ಸ್ವಾಮಿ, ಸದಸ್ಯರಾದ ಕೆ ಬಿ ನಾಯಕ್ ಮತ್ತು ಕೀವಾಡ ಕಲ್ಮೇಶ್ವರ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿ ಮುಂದೆ ವಿಚಾರಣೆ ಬಾಕಿ ಇದ್ದು, ಮಿಟ್ಟಲಕೋಡ್ ವಿಚಾರಣೆಗೆ ಹಾಜರಾಗಬೇಕು. ಮಿಟ್ಟಲಕೋಡ್ ಅವರಿಂದ ದುರುಪಯೋಗವಾಗಿರುವ ಮೊತ್ತವನ್ನು ಕಾನೂನಿನ ಅನುಸಾರ ಪರಿಷತ್ ಕಾರ್ಯದರ್ಶಿ ವಾಪಸು ಪಡೆಯಬೇಕು’ ಎಂದು ಕಾಮರಡ್ಡಿ ಅಧಿಸೂಚನೆಯಲ್ಲಿ ನಿರ್ದೇಶಿಸಿದ್ದಾರೆ.
ಮಿಟ್ಟಲಕೋಡ್ ಅವರು 2025ರ ಮಾರ್ಚ್ 7ರಿಂದ, 2025ರ ನವೆಂಬರ್ 24ರವರೆಗೆ ಕೆಎಸ್‌ಬಿಸಿ ನಾಮನಿರ್ದೇಶಿತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಅವರು, ‘ಪ್ರಯಾಣ ಮತ್ತು ತುಟ್ಟಿ ಭತ್ಯೆಗಳ ಖರ್ಚು ವೆಚ್ಚದಲ್ಲಿ ದುರುಪಯೋಗ ಮಾಡಿದ್ದಾರೆ’ ಎಂದು ಪರಿಷತ್ ಸದಸ್ಯರು ಆಪಾದಿಸಿದ್ದರು.
ಈ ಹಿನ್ನೆಲೆಯಲ್ಲಿ ಕೆಎಸ್‌ಬಿಸಿ ನಿರ್ದೇಶನದ ಮೇರೆಗೆ 2026ರ ಜನವರಿ 4ರಂದು ಪರಿಷತ್‌ನ ವಿಶೇಷಾಧಿಕಾರ ಸಮಿತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಕೆ ಬಿ ನಾಯಕ್, ಎಲ್.ಶ್ರೀನಿವಾಸ ಬಾಬು, ಎಚ್ ಎಲ್ ವಿಶಾಲ ರಘು ಮತ್ತು ಎಸ್ ಹರೀಶ್ ಅವರು ಸಭೆ ಸೇರಿ ಈ ಕುರಿತಂತೆ ಪರಿಶೀಲಿಸಿದ್ದರು. ಅಂದು ನೋಟಿಸ್‌ಗೆ ಉತ್ತರವಾಗಿ ಮಿಟ್ಟಲಕೋಡ್, ‘ಖರ್ಚುವೆಚ್ಚಗಳು ವಕೀಲರ ಹಿತದೃಷ್ಟಿಯಿಂದ ಮಾಡಿದ್ದಾಗಿರುತ್ತದೆ ಎಂದು ಹೇಳಲು ಬಯಸುತ್ತೇನೆ’ ಎಂದು ಉತ್ತರಿಸಿದ್ದರು.
‘ಮಿಟ್ಟಲಕೋಡ್ ತಮ್ಮ ಅಧಿಕಾರವಧಿಯಲ್ಲಿ ₹12.86 ಲಕ್ಷ ದುರುಪಯೋಗ ಮಾಡಿದ್ದಾರೆ ಮತ್ತು ಅವರ ಅಧ್ಯಕ್ಷರಾಗಿದ್ದ ಅಧಿಕಾರವಧಿಯಲ್ಲಿನ ನಡೆ ಕೆಎಸ್‌ಬಿಸಿ ನಿರ್ಣಯಗಳು ಹಾಗೂ ನಿಯಮಗಳಿಗೆ ವಿರುದ್ಧವಾಗಿವೆ. ಪರಿಷತ್ ಸದಸ್ಯರ ಆರೋಪದಂತೆ ಮಿಟ್ಟಲಕೋಡ್ ವಿರುದ್ಧದ ಹಣ ದುರುಪಯೋಗ, ಪರಿಷತ್‌ನ ಇತರೆ ಚೌಕಟ್ಟುಗಳ ಉಲ್ಲಂಘನೆ ಮತ್ತು ಗೌರವಕ್ಕೆ ಭಂಗ ತಂದ ಆಪಾದನೆಗಳನ್ನು ಪರಿಶೀಲಿಸಿದಾಗ ಅವರ ಸನ್ನದು ಮತ್ತು ಸದಸ್ಯತ್ವ ಅಮಾನತುಗೊಳಿಸುವುದು ಸೂಕ್ತ’ ಎಂದು ಸಮಿತಿ ಶಿಫಾರಸು ಮಾಡಿತ್ತು.
ಅಮಾನತು ಆದೇಶದ ಪ್ರತಿಯನ್ನು ಸುಪ್ರೀಂ ಕೋರ್ಟ್ ಮತ್ತು ದೇಶದ ಎಲ್ಲ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್, ಭಾರತೀಯ ವಕೀಲರ ಪರಿಷತ್ ಅಧ್ಯಕ್ಷ ಹಾಗೂ ಎಲ್ಲ ರಾಜ್ಯಗಳ ವಕೀಲರ ಪರಿಷತ್ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರು, ರಾಜ್ಯ ಕಾನೂನು ಮತ್ತು ಗೃಹ ಇಲಾಖೆ ಕಾರ್ಯದರ್ಶಿಗಳು ಹಾಗೂ ಎಲ್ಲ ನ್ಯಾಯಮಂಡಳಿಗಳೂ ಸೇರಿದಂತೆ ಸಕ್ಷಮ ಪ್ರಾಧಿಕಾರಗಳು ಹಾಗೂ ಸಂಬಂಧಿತ ವಕೀಲರ ಸಂಘಗಳಿಗೆ ರವಾನಿಸಲಾಗಿದೆ.