ಸುದ್ದಿಗಳು

ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಕಾಲ್ತುಳಿತ: ಪ್ರಕರಣಕ್ಕೆ ತಡೆ ಕೋರಿ ಹೈಕೋರ್ಟ್‌ ಕದತಟ್ಟಿದ ಕೆಎಸ್‌ಸಿಎ ಪದಾಧಿಕಾರಿಗಳು

ಕೆಎಸ್‌ಸಿಎ ನಿರ್ವಹಣಾ ಸಮಿತಿ, ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌, ಕಾರ್ಯದರ್ಶಿ ಎ ಶಂಕರ್‌, ಖಜಾಂಚಿ ಇ ಎಸ್‌ ಜಯರಾಂ ಅವರು ಮಧ್ಯಂತರ ಪರಿಹಾರದ ಭಾಗವಾಗಿ ಎಫ್‌ಐಆರ್‌ಗೆ ತಡೆಯಾಜ್ಞೆಗೆ ಕೋರಿದ್ದಾರೆ.

Bar & Bench

ಆರ್‌ಸಿಬಿ ವಿಜಯೋತ್ಸವಕ್ಕೂ ಮುನ್ನ ನಡೆದ ಕಾಲ್ತುಳಿತದ ಸಂಬಂಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಪದಾಧಿಕಾರಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕೆಎಸ್‌ಸಿಎ ನಿರ್ವಹಣಾ ಸಮಿತಿ, ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌, ಕಾರ್ಯದರ್ಶಿ ಎ ಶಂಕರ್‌, ಖಜಾಂಚಿ ಇ ಎಸ್‌ ಜಯರಾಂ ಅವರು ಮಧ್ಯಂತರ ಪರಿಹಾರದ ಭಾಗವಾಗಿ ಎಫ್‌ಐಆರ್‌ಗೆ ತಡೆಯಾಜ್ಞೆ ಕೋರಿದ್ದು, ವಕೀಲೆ ಪಿ ಎಲ್‌ ವಂದನಾ ವಕಾಲತ್ತು ವಹಿಸಿದ್ದಾರೆ. ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠವು ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸಲಿದೆ.

ಕಾಲ್ತುಳಿತ ಪ್ರಕರಣವನ್ನು ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ. ಹೀಗಾಗಿ, ಹಿಂದೆಯೇ ಪ್ರಕರಣ ದಾಖಲಿಸುವುದು ಸೂಕ್ತವಲ್ಲ. ಆರ್‌ಸಿಬಿ ವಿಜಯವನ್ನು ಆಚರಿಸುವುದಕ್ಕೆ ಸರ್ಕಾರವೇ ಕರೆ ನೀಡಿದ್ದು, ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಆಟಗಾರರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ ಮಂಡಲದ ಸದಸ್ಯರು ಹಾಗೂ ಅಧಿಕಾರಿಗಳು ಸನ್ಮಾನಿಸಿದ್ದಾರೆ. ಜನರನ್ನು ನಿಯಂತ್ರಿಸಬೇಕಿರುವುದು ಆರ್‌ಸಿಬಿ, ಕಾರ್ಯಕ್ರಮ ಸಂಘಕರು ಮತ್ತು ಪೊಲೀಸರ ಕರ್ತವ್ಯವಾಗಿದ್ದು, ಕೆಎಸ್‌ಸಿಎ ಯಾವ ರೀತಿಯಲ್ಲೂ ಜವಾಬ್ದಾರನಲ್ಲಿ ಎಂದು ಕೆಎಸ್‌ಸಿಎ ಪದಾಧಿಕಾರಿಗಳು ವಾದಿಸಿದ್ದಾರೆ.

ಮುಂದುವರಿದು, ಚಿನ್ನಸ್ವಾಮಿ ಕ್ರೀಡಾಂಗಣ ಮಾತ್ರ ಕೆಎಸ್‌ಸಿಎ ನಿಯಂತ್ರಣಕ್ಕೆ ಬರಲಿದ್ದು, ತಮಗೂ ಅಭಿಮಾನಿಗಳಿಗೂ ಸಂಬಂಧವಿಲ್ಲ. ಬೆಂಗಳೂರು ಪೊಲೀಸ್‌ ಆಯುಕ್ತರು ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿರುವುದು ಸಂಪೂರ್ಣವಾಗಿ ಪೊಲೀಸ್‌ ಇಲಾಖೆಯ ವೈಫಲ್ಯವನ್ನು ಎತ್ತಿ ತೋರುತ್ತದೆ. ಒತ್ತಡಕ್ಕೆ ಮಣಿದು ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ವಾದಿಸಿದ್ದಾರೆ.

ದೂರಿನಲ್ಲಿರು ಆರೋಪಗಳು ನಿರಾಧಾರವಾಗಿದ್ದು, ಅರ್ಜಿದಾರರ ವಿರುದ್ಧದ ಕಾನೂನು ಪ್ರಕ್ರಿಯೆ ಆರಂಭಿಸಿರುವುದು ಕಾನೂನಿನ ದುರ್ಬಳಕೆಯಾಗಿದೆ. ಅರ್ಜಿದಾರರನ್ನು ಬಂಧಿಸುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಲಾಗದು. ಏಕೆಂದರೆ ಅದು ಅವರ ವ್ಯಾಪ್ತಿಗೆ ಬರುವುದಿಲ್ಲ. ತನಿಖಾಧಿಕಾರಿಯು ಬಂಧನದ ಕುರಿತು ನಿರ್ಧರಿಸಬೇಕು. ಇಲ್ಲಿ ಮುಖ್ಯಮಂತ್ರಿ ಆದೇಶ ಇರುವುದರಿಂದ ತನಿಖಾಧಿಕಾರಿ ಕಣ್ಮುಚ್ಚಿ ಬಂಧಿಸುವ ಸಾಧ್ಯತೆ ಇದೆ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು, ಬಲವಂತದ ಕ್ರಮಕೈಗೊಳ್ಳುವುದರಿಂದ ತಮಗೆ ಸಮಸ್ಯೆಯಾಗಲಿದೆ ಎಂದು ಹೇಳಲಾಗಿದೆ.

ಹೀಗಾಗಿ, ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಸ್ವಯಂಪ್ರೇರಿತವಾಗಿ ನೀಡಿದ ದೂರಿನ ಅನ್ವಯ ಬಿಎನ್‌ಎಸ್‌ ಸೆಕ್ಷನ್‌ಗಳಾದ 105, 115(2), 118(1), 118(2) ಜೊತೆಗೆ 3(5), 190, 132, 125(a) 125(b) ಅಡಿ ದಾಖಲಿಸಿರುವ ಪ್ರಕರಣಕ್ಕೆ ತಡೆ ನೀಡಬೇಕು ಎಂದು ಕೋರಲಾಗಿದೆ.

ಈ ನಡುವೆ, ರಾಯಲ್‌ ಚಾಲೆಂಜರ್ಸ್‌ ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಮಾರುಕಟ್ಟೆ ಮತ್ತು ಆದಾಯ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸಲೆ ಅವರು ತಮ್ಮನ್ನು ಅಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಬೆಳಿಗ್ಗೆಯಷ್ಟೇ ನಿಖಿಲ್‌ ಸೋಸಲೆ ಸೇರಿ ಮೂವರನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.