Lawyers 
ಸುದ್ದಿಗಳು

ರಾಜ್ಯದ 16 ಜಿಲ್ಲೆಗಳಲ್ಲಿ ಪೂರ್ಣಕಾಲಿಕ ಕಾನೂನು ನೆರವು ವಕೀಲರ 66 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸೆ.5ರ ಗಡುವು

ಆರಂಭದಲ್ಲಿ ಬೆಳಗಾವಿಯಲ್ಲಿ ಜಾರಿಗೊಳಿಸಿದ್ದ ಪೈಲಟ್‌ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ 16 ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಲಾಗುತ್ತಿದೆ ಎಂದು ಕೆಎಸ್‌ಎಲ್‌ಎಸ್‌ಎ ತಿಳಿಸಿದೆ.

Siddesh M S

ಅಶಕ್ತರು ಮತ್ತು ಆರ್ಥಿಕವಾಗಿ ಸಬಲರಲ್ಲದವರಿಗೆ ನ್ಯಾಯದಾನ ಖಾತರಿಪಡಿಸುವ ನಿಟ್ಟಿನಲ್ಲಿ ಕಾನೂನು ನೆರವು ಅಭಿರಕ್ಷಕರ ವ್ಯವಸ್ಥೆ (ಎಲ್‌ಎಡಿಸಿಎಸ್‌) ಜಾರಿ ಮಾಡಲು ರಾಜ್ಯ ಕಾನೂನು ಸೇವೆ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಮುಂದಾಗಿದೆ. ಇದರ ಭಾಗವಾಗಿ ರಾಜ್ಯದ 16 ಜಿಲ್ಲೆಗಳಲ್ಲಿ ಕಾನೂನು ನೆರವು ಅಭಿರಕ್ಷಕರ ಕಚೇರಿಗೆ ಗುತ್ತಿಗೆ ಆಧಾರದಲ್ಲಿ ಎರಡು ವರ್ಷಗಳ ಅವಧಿಗೆ ಪೂರ್ಣಕಾಲಿಕ ವಕೀಲರ ನೇಮಕಾತಿಗೆ ಕೆಎಸ್‌ಎಲ್‌ಎಸ್‌ಎ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಹಾಸನ, ಕಲಬುರ್ಗಿ, ಮಂಗಳೂರು, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಆಸಕ್ತ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸೆಪ್ಟೆಂಬರ್‌ 5 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆರಂಭದಲ್ಲಿ ಬೆಳಗಾವಿಯಲ್ಲಿ ಜಾರಿಗೊಳಿಸಿದ್ದ ಪೈಲಟ್‌ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ 16 ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಲಾಗುತ್ತಿದೆ ಎಂದು ಕೆಎಸ್‌ಎಲ್‌ಎಸ್‌ಎ ತಿಳಿಸಿದೆ.

ಬಂಧನ ಪೂರ್ವ, ಬಂಧನ ಮತ್ತು ರಿಮ್ಯಾಂಡ್‌ ಹಂತ, ವಿಚಾರಣೆ ಮತ್ತು ಮೇಲ್ಮನವಿ ಇತ್ಯಾದಿಯವರೆಗೂ ಕಾನೂನು ಸಲಹೆ ಕೆಲಸಕ್ಕಾಗಿ ವಿಶೇಷವಾಗಿ ಕ್ರಿಮಿನಲ್‌ ಪ್ರಕರಣ ನಡೆಸುವುದಕ್ಕಾಗಿಯೇ ಎಲ್‌ಎಡಿಸಿಎಸ್‌ ರೂಪಿಸಲಾಗಿದೆ. ಕಟ್ಟಕಡೆಯ ಪ್ರಜೆಗೆ ಸಮಯಕ್ಕೆ ಅನುಗುಣವಾಗಿ ಗುಣಾತ್ಮಕ ಮತ್ತು ಸಮರ್ಥ ಹಾಗೂ ವೃತ್ತಿಪರ ಕಾನೂನು ಸೇವೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಕೆಎಸ್‌ಎಲ್‌ಎಸ್‌ಎ ತಿಳಿಸಿದೆ. ಸಾಂಪ್ರದಾಯಿಕವಾಗಿ ಪ್ಯಾನೆಲ್‌ ವಕೀಲರಿಗೆ ಪ್ರಕರಣಗಳನ್ನು ನಡೆಸಲು ನೀಡುತ್ತಿದ್ದಕ್ಕೆ ಎಲ್‌ಎಡಿಸಿಎಸ್‌ ಪರ್ಯಾಯವಾಗಲಿದೆ ಎಂಬುದು ಕೆಎಸ್‌ಎಲ್‌ಎಸ್‌ಎ ಅಭಿಪ್ರಾಯವಾಗಿದೆ.

ಪ್ರತಿ ಕಾನೂನು ನೆರವು ಅಭಿರಕ್ಷಕರ ಕಚೇರಿಯಲ್ಲಿ ಒಬ್ಬರು ಮುಖ್ಯ ಕಾನೂನು ನೆರವು ಪ್ರತಿವಾದಿ ವಕೀಲರು (ಲೀಗಲ್‌ ಏಯ್ಡ್‌ ಡಿಫೆನ್ಸ್‌ ಕೌನ್ಸೆಲ್), 1-3 ಉಪ ಮುಖ್ಯ ಕಾನೂನು ನೆರವು ಪ್ರತಿವಾದಿ ವಕೀಲರು, ‌2-10 ಸಹಾಯಕ ಕಾನೂನು ನೆರವು ಪ್ರತಿವಾದಿ ವಕೀಲರು ಇರಲಿದ್ದಾರೆ (ಜಿಲ್ಲೆಯಲ್ಲಿನ ಕಾನೂನು ನೆರವು ಕೆಲಸವನ್ನು ಆಧರಿಸಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಹುದ್ದೆಗಳನ್ನು ನಿರ್ಧರಿಸಲಿದೆ). ಮೇಲಿನ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹತೆ ಹೊಂದಿರುವ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ ತೊಡಗಿಸಿಕೊಳ್ಳಲು ಬಯಸುವ ವಕೀಲರಿಗೆ ಖಾಸಗಿ ಪ್ರಕರಣ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಕೆಎಸ್‌ಎಲ್‌ಎಸ್‌ಎ ಸ್ಪಷ್ಟಪಡಿಸಿದೆ.

ಎಲ್‌ಎಡಿಸಿಎಸ್‌ ಕಾನೂನು ವಿದ್ಯಾರ್ಥಿಗಳಿಗೆ ಕಲಿಕೆ ದೃಷ್ಟಿಯಿಂದ ವಿಶಿಷ್ಟ ಅವಕಾಶವಾಗಿದೆ. ಕಾನೂನು ವಿದ್ಯಾರ್ಥಿಗಳಿಗೆ ಕ್ರಿಮಿನಲ್‌ ಕಾನೂನಿನ ಪ್ರಾಯೋಗಿನ ಜ್ಞಾನ ಸಂಪಾದನೆಗೆ ಇಂಟರ್ನ್‌ಗಳನ್ನಾಗಿ ಮಾಡಿಕೊಳ್ಳಲು ಪ್ರಧಾನ ಕಾನೂನು ನೆರವು ಪ್ರತಿವಾದಿ ವಕೀಲರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.

ಆಸಕ್ತರು www.kslsa.kar.nic.in ಗೆ ಭೇಟಿ ನೀಡಿ, ಅರ್ಜಿ ಡೌನ್‌ಲೌಡ್‌ ಮಾಡಿ ಅದನ್ನು ತುಂಬಿದ ಬಳಿಕ ಸಂಬಂಧಿತ ಜಿಲ್ಲಾ ಕಾನೂನು ಪ್ರಾಧಿಕಾರ ಕಚೇರಿಗಳಲ್ಲಿ ಸಲ್ಲಿಕೆ ಮಾಡಬೇಕು.

66 ಹುದ್ದೆಗಳಿಗೆ ನೇಮಕ

16 ಜಿಲ್ಲೆಗಳಲ್ಲಿ 16 ಪ್ರಧಾನ ಕಾನೂನು ನೆರವು ವಕೀಲರು, 19 ಉಪ ಪ್ರಧಾನ ಕಾನೂನು ನೆರವು ವಕೀಲರು ಹಾಗೂ 21 ಸಹಾಯಕ ಕಾನೂನು ನೆರವು ವಕೀಲರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಎ ದರ್ಜೆ ನಗರಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರಧಾನ, ಉಪ ಪ್ರಧಾನ ಹಾಗೂ ಸಹಾಯಕ ವಕೀಲರಿಗೆ ಕ್ರಮವಾಗಿ ₹80 ಸಾವಿರ, ₹60 ಸಾವಿರ ಮತ್ತು ₹35 ಸಾವಿರ ಮಾಸಿಕ ವೇತನ ನೀಡಲು ನಿರ್ಧರಿಸಲಾಗಿದೆ. ಉಳಿದ ಬಿ ದರ್ಜೆ ನಗರಗಳಲ್ಲಿ ಕ್ರಮವಾಗಿ ₹70 ಸಾವಿರ, ₹45 ಸಾವಿರ ಮತ್ತು ₹30 ಸಾವಿರ ವೇತನ ಪಾವತಿಸಲಾಗುತ್ತದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ (ಡಿಎಸ್‌ಎಲ್‌ಎ) ಅಧ್ಯಕ್ಷರಾದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನು ಒಳಗೊಂಡ ಆಯ್ಕೆ ಸಮಿತಿ ಇರಲಿದೆ. ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಿರುವ ಮೂವರು ಹಿರಿಯ ನ್ಯಾಯಾಂಗ ಅಧಿಕಾರಗಳು ಆಯ್ಕೆ ಸಮಿತಿಯಲ್ಲಿ ಇರಬೇಕು ಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಡುವ ಯಾರೂ ಆಯ್ಕೆ ಸಮಿತಿಯಲ್ಲಿ ಇರಬಾರದು. ಆಗಸ್ಟ್‌ 27ರ ಒಳಗೆ ಆಯ್ಕೆ ಸಮಿತಿ ಅಂತಿಮವಾಗಬೇಕು ಎಂದು ಡಿಎಸ್‌ಎಲ್‌ಎಗೆ ಸೂಚಿಸಲಾಗಿದೆ. ಇಲ್ಲಿನ ಆಯ್ಕೆಯು ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ಅಧ್ಯಕ್ಷರ ಒಪ್ಪಿಗೆಗೆ ಒಳಪಟ್ಟಿರುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನವು ಸೆಪ್ಟೆಂಬರ್‌ 15ಕ್ಕೆ ನಿಗದಿಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳ ಅಂಕಪಟ್ಟಿ ಒಳಗೊಂಡ ಪಟ್ಟಿಯನ್ನು ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ಅಧ್ಯಕ್ಷರ ಅನುಮತಿ ಪಡೆಯಲು ಮುಚ್ಚಿದ ಲಕೋಟೆಯಲ್ಲಿ ಸೆಪ್ಟೆಂಬರ್‌ 20ರಂದು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಪ್ರಧಾನ ಕಾನೂನು ನೆರವು ಪ್ರತಿವಾದಿ ವಕೀಲರು: ಕ್ರಿಮಿನಲ್‌ ಕಾನೂನಿನಲ್ಲಿ 10 ವರ್ಷಗಳ ಪ್ರಾಕ್ಟೀಸ್‌ ಮಾಡಿರಬೇಕು. ಸೆಷನ್ಸ್‌ ನ್ಯಾಯಾಲಯಗಳಲ್ಲಿ ಕನಿಷ್ಠ 30 ಕ್ರಿಮಿನಲ್‌ ವಿಚಾರಣೆ ನಡೆಸಿರಬೇಕು. ಅಗತ್ಯ ಸಂದರ್ಭದಲ್ಲಿ ಇದರಲ್ಲಿ ವಿನಾಯಿತಿ ಇರಲಿದೆ.

ಉಪ ಪ್ರಧಾನ ಕಾನೂನು ನೆರವು ಪ್ರತಿವಾದಿ ವಕೀಲರು: ಕ್ರಿಮಿನಲ್‌ ಕಾನೂನಿನಲ್ಲಿ 7 ವರ್ಷಗಳ ಪ್ರಾಕ್ಟೀಸ್‌. ಕಾನೂನು ಸಂಶೋಧನೆಯಲ್ಲಿ ಉತ್ತಮ ಕೌಶಲ. ಸೆಷನ್ಸ್‌ ನ್ಯಾಯಾಲಯಗಳಲ್ಲಿ ಕನಿಷ್ಠ 30 ಕ್ರಿಮಿನಲ್‌ ವಿಚಾರಣೆ ನಡೆಸಿರಬೇಕು. ಅಗತ್ಯ ಸಂದರ್ಭದಲ್ಲಿ ಇದರಲ್ಲಿ ವಿನಾಯಿತಿ ಇರಲಿದೆ.

ಸಹಾಯಕ ಪ್ರಧಾನ ಕಾನೂನು ನೆರವು ಪ್ರತಿವಾದಿ ವಕೀಲರು: 0-3 ವರ್ಷ ಕ್ರಿಮಿನಲ್‌ ಕಾನೂನಿನ ಪ್ರಾಕ್ಟೀಸ್ ಮಾಡಿರಬೇಕು.‌ ಮೇಲಿನ ಎಲ್ಲಾ ಹುದ್ದೆಗಳ ಆಕಾಂಕ್ಷಿಗಳು ಮೌಖಿಕ ಮತ್ತು ಲಿಖಿತ ಭಾಷೆಯ ಮೇಲೆ ಹಿಡಿತ. ಕಂಪ್ಯೂಟರ್‌ ಜ್ಞಾನ, ತಂಡ ಮುನ್ನಡೆಸಲು ಸಮರ್ಥರಾಗಿಬೇಕು.