KSLU and Karnataka High Court 
ಸುದ್ದಿಗಳು

ಲಿಂಗತ್ವ ಅಲ್ಪಸಂಖ್ಯಾತ ಕಾನೂನು ವಿದ್ಯಾರ್ಥಿಗಳಿಗೆ ಶೇ1ರಷ್ಟು ಮೀಸಲಾತಿ: ಹೈಕೋರ್ಟ್‌ಗೆ ಕೆಎಸ್‌ಎಲ್‌ಯು ವಿವರಣೆ

ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳ ಕನಿಷ್ಠ ಅರ್ಹತಾ ಅಂಕವನ್ನು ಶೇ 40ಕ್ಕೆ ಇಳಿಸಲಾಗಿದೆ ಎಂದೂ ಪೀಠಕ್ಕೆ ತಿಳಿಸಿದ ಕೆಎಸ್‌ಎಲ್‌ಯು.

Bar & Bench

‘ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್‌ಎಲ್‌ಯು) ಮೂರು ವರ್ಷದ ಎಲ್‌ಎಲ್‌.ಬಿ ಕೋರ್ಸ್‌ ಪ್ರವೇಶದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಶೇ1ರಷ್ಟು ಮೀಸಲಾತಿ ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ರಾಜ್ಯ ಸರ್ಕಾರವು ಈಚೆಗೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಲಿಂಗತ್ವ ಅಲ್ಪಸಂಖ್ಯಾತ ಮೀಸಲಾತಿ ಮತ್ತು ಅವರಿಗೆ ಆರ್ಥಿಕ ನೆರವು ಯೋಜನೆ ರೂಪಿಸುವಂತೆ ಆದೇಶಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ಟಿ ಪಿ ವಿವೇಕಾನಂದ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Justice Anu Sivaraman & Justice T P Vivekananda

ವಿಚಾರಣೆ ವೇಳೆ ಕೆಎಸ್‌ಎಲ್‌ಯು ಪರ ವಕೀಲರು, ‘ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಹೊರಡಿಸಿದ್ದ ವಿಶೇಷ ಆದೇಶದ ಆಧಾರದಲ್ಲಿ ಕೆಎಸ್‌ಎಲ್‌ಯು ಇದೇ 16ರಂದು ಪ್ರವೇಶ ಅಧಿಸೂಚನೆ ಹೊರಡಿಸಿದೆ. ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳ ಕನಿಷ್ಠ ಅರ್ಹತಾ ಅಂಕವನ್ನು ಶೇ 40ಕ್ಕೆ ಇಳಿಸಲಾಗಿದೆ’ ಎಂದೂ ಪೀಠಕ್ಕೆ ತಿಳಿಸಿದರು. ಇದನ್ನು ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಇದೇ 29ಕ್ಕೆ ನಿಗದಿಪಡಿಸಿದೆ.

ಈ ಮೀಸಲಾತಿಯ ಅನುಷ್ಠಾನವು ನ್ಯಾಯಾಲಯದ ಮುಂದಿನ ಆದೇಶ ಹಾಗೂ ಸರ್ಕಾರ ರೂಪಿಸಲಿರುವ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.