KSLU
KSLU 
ಸುದ್ದಿಗಳು

ಕೆಎಸ್‌ಎಲ್‌ಯು ಕುಲಪತಿ ನೇಮಕಾತಿ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ; ಸೆ.1ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

Bar & Bench

ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್‌ಎಲ್‌ಯು) ಕುಲಪತಿ ಹುದ್ದೆಗೆ ಡಾ. ಸಿ ಬಸವರಾಜು ಅವರನ್ನು ರಾಜ್ಯಪಾಲರು ನೇಮಕ ಮಾಡಿರುವ ಆದೇಶ ರದ್ದುಪಡಿಸಲು ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕುಲಪತಿ ಪರ ವಕೀಲರಿಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ.

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಹಿರಿಯ ಪ್ರಾಧ್ಯಾಪಕರಾದ ನಂದಿಮಠ ಓಂಪ್ರಕಾಶ್‌ ವೀರಯ್ಯ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಕುಲಪತಿ ಡಾ. ಬಸವರಾಜು ಪರ ವಕೀಲರು ತಮ್ಮ ಕಕ್ಷೀದಾರರ ಆಕ್ಷೇಪಣೆ ಸಿದ್ಧವಾಗಿದೆ. ಇಂದೇ ರಿಜಿಸ್ಟ್ರಿಯಲ್ಲಿ ಸಲ್ಲಿಕೆ ಮಾಡಲಾಗುವುದು ಎಂದರು. ಅರ್ಜಿದಾರರು ಮತ್ತು ರಾಜ್ಯಪಾಲರ ವಕೀಲರು ತಾವು ವಾದಕ್ಕೆ ಸಿದ್ಧವಾಗಿರುವುದಾಗಿ ತಿಳಿಸಿದರು. ಇದನ್ನು ಆಲಿಸಿದ ಪೀಠವು ಡಾ. ಬಸವರಾಜು ಅವರ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ಮುಂದೂಡಿದೆ.

ರಾಜ್ಯಪಾಲರು ಯಾವುದೇ ಅರ್ಹತೆ ಪರಿಗಣಿಸದೆ ಹಾಗೂ ಮುಖ್ಯಮಂತ್ರಿ ಅವರ ಅನುಮತಿ ಪಡೆಯದೇ ಏಕಪಕ್ಷೀಯ ಮತ್ತು ಅಕ್ರಮವಾಗಿ ಡಾ. ಬಸವರಾಜು ಅವರನ್ನು 2022ರ ಸೆಪ್ಟೆಂಬರ್‌ 22ರಂದು ಕುಲಪತಿಯಾಗಿ ನೇಮಕ ಮಾಡಿದ್ದಾರೆ. ಡಾ. ಬಸವರಾಜು ಅವರಿಗೆ ಅಗತ್ಯ ಅನುಭವ ಇಲ್ಲ. ಕೆಎಸ್‌ಎಲ್‌ಯುಗೆ ಡಾ. ಬಸವರಾಜು ಅವರನ್ನು ನೇಮಕ ಮಾಡುವ ಮೂಲಕ ರಾಜ್ಯಪಾಲರು ಕೆಎಸ್‌ಎಲ್‌ಯು ಕಾಯಿದೆ 2009ರ ಸೆಕ್ಷನ್‌ 14(3) ಅನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.