KSPCB and Karnataka HC 
ಸುದ್ದಿಗಳು

ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕ: ತಡೆ ನೀಡಿರುವುದನ್ನು ನೇಮಕಾತಿಗೆ ಸಮ್ಮತಿಸಲಾಗಿದೆ ಎಂದು ಭಾವಿಸಬಾರದು ಎಂದ ಹೈಕೋರ್ಟ್

“ತಿದ್ದುಪಡಿ ಆದೇಶಕ್ಕೆ ತಡೆ ನೀಡಿರುವುದನ್ನು ಅರ್ಜಿದಾರರ ನೇಮಕಾತಿಗೆ ನ್ಯಾಯಾಲಯ ಸಮ್ಮತಿಸಿದೆ ಎಂದು ಭಾವಿಸಬಾರದು. ಹೀಗಾಗಿ, ನಿಯಮಾವಳಿಗೆ ಅನುಗುಣವಾಗಿ ಅರ್ಜಿದಾರರ ನೇಮಕಾತಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ” ಎಂದು ಆದೇಶ ಮಾಡಿದೆ.

Bar & Bench

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಶಾಂತ್ ಎ. ತಿಮ್ಮಯ್ಯ ಅವರ ಅಧಿಕಾರವಧಿಯನ್ನು ಮೊಟಕುಗೊಳಿಸಿ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿದೆ. ತಿದ್ದುಪಡಿಗೆ ತಡೆ ನೀಡಿರುವುದನ್ನು ಅರ್ಜಿದಾರರ ನೇಮಕಾತಿಗೆ ನ್ಯಾಯಾಲಯ ಸಮ್ಮತಿಸಿದೆ ಎಂದು ಭಾವಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಸ್ಪಷ್ಟಪಡಿಸಿದೆ.

ಕೆಎಸ್‌ಪಿಸಿಬಿ ಅಧ್ಯಕ್ಷರ ಅಧಿಕಾರವಧಿ ಮೊಟಕುಗೊಳಿಸಿ‌ ರಾಜ್ಯ ಸರ್ಕಾರ 2023ರ ಆಗಸ್ಟ್‌ 31ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶಾಂತ್ ಎ. ತಿಮ್ಮಯ್ಯ ಹಾಗೂ ಮತ್ತಿತರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಕಳೆದ ವಿಚಾರಣೆಯಲ್ಲಿ 2023ರ ಆಗಸ್ಟ್‌ 31ರಂದು ತಿದ್ದುಪಡಿ ಆದೇಶವನ್ನು ಅಮಾನತಿನಲ್ಲಿಡುವಂತೆ ಹಾಗೂ ಮುಂದಿನ ವಿಚಾರಣೆಯವರೆಗೆ ಜಾರಿಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಲಾಗಿತ್ತು. ಅರ್ಜಿಗಳನ್ನು ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದೆ. ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವುದಕ್ಕೂ ಮುನ್ನ ರಾಜ್ಯ ಸರ್ಕಾರವು ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ” ಎಂದು ಪೀಠ ವಿವರಿಸಿದೆ.

“ಅರ್ಜಿದಾರರ ನೇಮಕಾತಿಯನ್ನೂ ನ್ಯಾಯಾಲಯ ಪರಿಶೀಲಿಸುವ ಅಗತ್ಯವಿದೆ. ಈ ನೆಲೆಯಲ್ಲಿ 2023ರ ಆಗಸ್ಟ್‌ 31ರ ತಿದ್ದುಪಡಿ ಆದೇಶಕ್ಕೆ ಮುಂದಿನ ವಿಚಾರಣೆಯವರೆಗೆ ಮಾತ್ರ ತಡೆ ನೀಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಪಕ್ಷಕಾರರಿಗೆ ಆಕ್ಷೇಪಣೆ, ತೀರ್ಪುಗಳ ಪಟ್ಟಿ, ವಾದದ ಅಂಶ ಸೇರಿದಂತೆ ಇತ್ಯಾದಿ ಯಾವುದೇ ದಾಖಲೆ ಇದ್ದರೂ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದನ್ನು ಪಕ್ಷಕಾರರು ಪರಸ್ಪರ ಹಂಚಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

“ತಿದ್ದುಪಡಿ ಆದೇಶಕ್ಕೆ ತಡೆ ನೀಡಿರುವುದನ್ನು ಅರ್ಜಿದಾರರ ನೇಮಕಾತಿಗೆ ನ್ಯಾಯಾಲಯ ಸಮ್ಮತಿಸಿದೆ ಎಂದು ಭಾವಿಸಬಾರದು. ಹೀಗಾಗಿ, ನಿಯಮಾವಳಿಗೆ ಅನುಗುಣವಾಗಿ ಅರ್ಜಿದಾರರ ನೇಮಕಾತಿಯಾಗಿದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ” ಎಂದು ಆದೇಶ ಮಾಡಿದೆ.

ಮುಂದಿನ ವಿಚಾರಣೆಯವರೆಗೆ ಅರ್ಜಿದಾರರು ಕೆಎಸ್‌ಪಿಸಿಬಿ ಅಧ್ಯಕ್ಷರಾಗಿ ಕರ್ತವ್ಯನಿರ್ವಹಿಸಬಹುದು. ಅವರು ದೈನಂದಿನ ಚಟುವಟಿಕೆಗಳನ್ನು ಮಾತ್ರ ನಡೆಸಬಹುದು. ಮುಂದಿನ ಆದೇಶದವರೆಗೆ ಯಾವುದೇ ರೀತಿ ನೀತಿ ನಿರೂಪಣೆಯ ನಿರ್ಧಾರ ಕೈಗೊಳ್ಳುವಂತಿಲ್ಲ. ತುರ್ತಾಗಿ ಯಾವುದೇ ನೀತಿಯ ಭಾಗವಾಗಿ ನಿರ್ಧಾರ ಕೈಗೊಳ್ಳಬೇಕಾದರೆ ಪಕ್ಷಕಾರರು ನ್ಯಾಯಾಲಯವನ್ನು ಸಂಪರ್ಕಿಸಬಹುದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಅರ್ಜಿಯನ್ನು ಅಕ್ಟೋಬರ್‌ 6ಕ್ಕೆ ಮುಂದೂಡಿದೆ.

ಸರ್ಕಾರದ ತಿದ್ದುಪಡಿ ಆದೇಶದಲ್ಲಿ ಏನಿದೆ?

ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ 05.03.2019ರಂದು ಜಯರಾಂ ಎಂಬವರನ್ನು 04.03.2022ರವರೆಗೆ ನೇಮಕ ಮಾಡಲಾಗಿತ್ತು. ಜಯರಾಂ ಅವರು 20.06.2019ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷರ ಹುದ್ದೆಗೆ ಉಸ್ತುವಾರಿ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಆನಂತರ ನೇಮಕಗೊಂಡವರು ಮೂರರಿಂದ ಆರು ತಿಂಗಳವರೆಗೆ ಹುದ್ದೆಯಲ್ಲಿದ್ದರು. 15.11.2021ರಂದು ಶಾಂತ್‌ ತಿಮ್ಮಯ್ಯ ಅವರನ್ನು ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಅವರ ಅವಧಿಯು 04.03.2022ಕ್ಕೆ ಬದಲಾಗಿ 14.11.2024ಕ್ಕೆ ಮುಗಿಯುತ್ತದೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಈ ಪ್ರಮಾದವನ್ನು ಸರಿಪಡಿಸಲಾಗಿದ್ದು, ಶಾಂತ್‌ ತಿಮ್ಮಯ್ಯ ಅವರ ಅಧ್ಯಕ್ಷ ಅವಧಿಯು 04.03.2022ಕ್ಕೆ ಅಂತ್ಯವಾಗಿದೆ ಎಂದು ತಿದ್ದುಪಡಿಯಲ್ಲಿ ವಿವರಿಸಲಾಗಿದೆ.