ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಎಚ್ ಸಿ ಬಾಲಚಂದ್ರ ನೇಮಕಾತಿಗೆ ನೀಡಲಾಗಿದ್ದ ಮಧ್ಯಂತರ ತಡೆ ಆದೇಶವನ್ನು ವಿಸ್ತರಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಬಾಲಚಂದ್ರ ಅವರ ನೇಮಕಾತಿ ಆಕ್ಷೇಪಿಸಿ ಬೆಂಗಳೂರಿನ ಎಂ ಎಸ್ ಹೇಮಂತ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ವಿ.ರೋಣ ಅವರು, ಹಾಲಿ ಸದಸ್ಯ ಕಾರ್ಯದರ್ಶಿ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ವಿಜೇತರಾಗಿದ್ದು, ಪರಿಸರದ ವಿಷಯಗಳಲ್ಲಿ ಅವರಿಗೆ 16 ವರ್ಷಗಳ ಅನುಭವವಿದೆ. 2024ರ ಜನವರಿ 11ರಂದು ಕಾರ್ಯಭಾರ ವಹಿಸಿಕೊಂಡಿದ್ದು, ತೃಪ್ತಿಕರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಅವರನ್ನು ಅವರ ಸ್ಥಾನದಿಂದ ಕದಲಿಸಬಾರದು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿ ಹುದ್ದೆಯನ್ನು ಐಎಎಸ್ ಮತ್ತು ಐಎಫ್‌ಎಸ್ ಹಂತದ ಅಧಿಕಾರಿಗಳಿಗೆ ಎರಡು ಮೂರು ವರ್ಷಗಳಿಗೆ ಮಾತ್ರವೇ ನೀಡಲಾಗುತ್ತಿರುವುದು ತರವಲ್ಲ. ಈ ಅಧಿಕಾರಿಗಳು ವರ್ಗಾವಣೆ ಹೊಂದುವ ಕಾರಣ ಇಂತಹ ಹುದ್ದೆಗಳಲ್ಲಿ ಕಾರ್ಯದ ಸ್ಥಿರತೆಯ ಅಭಾವ ಉದ್ಭವಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಂತೆಯೇ, ಈ ಹಿಂದೆ ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ವಿಸ್ತರಿಸಲು ನಿರಾಕರಿಸಿತಲ್ಲದೇ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಕೆ ಯಶಸ್ವಿ ಪ್ರಸಾದ್ ವಕಾಲತ್ತು ವಹಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳ ನಾಮ ನಿರ್ದೇಶನ ಮಾಡುವ ನಿಟ್ಟಿನಲ್ಲಿ ಜಲ ಕಾಯಿದೆ (ಪರಿಸರ ಮಾಲಿನ್ಯ ತಡೆ ಹಾಗೂ ನಿಯಂತ್ರಣ)–1974ರ ಅಡಿಯಲ್ಲಿ ಷರತ್ತುಗಳು ಮತ್ತು ನಿಯಮಗಳನ್ನು 2023ರ ಆಗಸ್ಟ್ 31ರಂದು ರೂಪಿಸಲಾಗಿದೆ.
ಬಾಲಚಂದ್ರ ಅವರನ್ನು ಕಾನೂನಿಗೆ ವಿರುದ್ಧವಾಗಿ ನೇಮಕ ಮಾಡಲಾಗಿದ್ದು, ಅವರನ್ನು ಆ ಸ್ಥಾನದಿಂದ ಪದಚ್ಯುತಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಪ್ರಕರಣದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿ ಸೇರಿದಂತೆ ಒಟ್ಟು ಏಳು ಜನರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.