ಸುದ್ದಿಗಳು

ಕೆರೆ ಒತ್ತುವರಿ ಆರೋಪ: ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ವಿರುದ್ಧದ ತನಿಖೆಗೆ ನೀಡಿರುವ ತಡೆ ಆದೇಶದ ವಿಸ್ತರಣೆ

ಶ್ರೀ ರವಿಶಂಕರ್‌ ನೇರವಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪೂರಕವಾಗಿ ಸರ್ಕಾರ ದಾಖಲೆಗಳನ್ನು ಒದಗಿಸದ ಹೊರತು ಆರೋಪವಿಲ್ಲದೇ ಅವರನ್ನು ಪ್ರಕರಣದಲ್ಲಿ ಎಳೆದು ತರಲಾಗದು ಎಂಬ ಆದೇಶ ವಿಸ್ತರಿಸಿದ ಹೈಕೋರ್ಟ್‌.

Bar & Bench

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದುಕೋರಿ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಅವರು ಸಲ್ಲಿಸಿರುವ ಅರ್ಜಿಯನ್ನು ಫೆಬ್ರವರಿ 5ರಂದು ವಿಚಾರಣೆ ನಡೆಸುವುದಾಗಿ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಿಳಿಸಿದೆ.

ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ (ಬಿಎಂಟಿಎಫ್) ದಾಖಲಿಸಿರುವ ಎಫ್‌ಐಆರ್ ಪ್ರಶ್ನಿಸಿ ಶ್ರೀ ರವಿಶಂಕರ್ ಅವರು ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿಯು ಜನವರಿ 21ರಂದು ವಿಚಾರಣೆಗೆ ಬಂದಿದ್ದಾಗ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು, ಪ್ರಕರಣದಲ್ಲಿ ರವಿಶಂಕರ್ ಅವರು ಆರೋಪಿಯಾಗಿದ್ದಾರೆ. ಆದರೆ, ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಪ್ರಮಾಣಪತ್ರಕ್ಕೆ ಆಶ್ರಮದ ಭಕ್ತರೊಬ್ಬರಾದ ಸುಬ್ರಹ್ಮಣ್ಯ ಎಂಬುವರು ಸಹಿ ಹಾಕಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಕ್ರಿಮಿನಲ್ ಪ್ರಕ್ರಿಯೆಗಳಲ್ಲಿ, ಅದರಲ್ಲೂ ಪ್ರಕರಣ ರದ್ದತಿ ಕೋರುವ ಪ್ರಕ್ರಿಯೆಗಳಲ್ಲಿ ಪವರ್ ಆಫ್ ಅಟಾರ್ನಿ ಹೊಂದಿರುವವರು ಆರೋಪಿಯನ್ನು ಪ್ರತಿನಿಧಿಸಲು ಅಥವಾ ಆರೋಪಿಯ ಪರವಾಗಿ ಪ್ರಮಾಣಪತ್ರ ಸಲ್ಲಿಸಲು ಅವಕಾಶವಿಲ್ಲ” ಎಂದಿದ್ದರು.

ಮುಂದುವರಿದು ಅರ್ಜಿಯು ದೋಷಪೂರಿತವಾಗಿದ್ದು ಅದನ್ನು ವಜಾಗೊಳಿಸಬೇಕು ಎಂದು ಕೋರಿದ್ದರಲ್ಲದೆ, ಅರ್ಜಿದಾರರ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿ ಜನವರಿ 13ರಂದು ಹೊರಡಿಸಿದ್ದ ಮಧ್ಯಂತರ ಆದೇಶ ವಿಸ್ತರಿಸುವುದಕ್ಕೂ ಆಕ್ಷೇಪಿಸಿದ್ದರು.

ಅರ್ಜಿದಾರರ ಪರ ವಕೀಲ ಪಿ ಪ್ರಸನ್ನಕುಮಾರ್ ಅವರು “ಅರ್ಜಿ ಸಲ್ಲಿಸುವ ಸಮಯದಲ್ಲಿ ರವಿಶಂಕರ್ ಅವರು ಲಭ್ಯವಿಲ್ಲದ ಕಾರಣ ಅವರಿಂದ ಪ್ರಮಾಣಪತ್ರ ಪಡೆಯಲು ಸಾಧ್ಯವಾಗಲಿಲ್ಲ ಎಂದು ಸಮರ್ಥನೆ ನೀಡಿದ್ದರು. ಅದಕ್ಕೆ ಪೀಠವು ಇದು ತಾಂತ್ರಿಕ ಅಂಶವೇ ಆದರೂ, ಅತ್ಯಗತ್ಯವಾದ ಅಂಶವಾಗಿದೆ. ಇದು ದೋಷಪೂರಿತ ಅರ್ಜಿಯಾಗಿದೆ. ನ್ಯಾಯಾಲಯದ ಮುಂದೆ ಪ್ರಮಾಣಪತ್ರ ಸಲ್ಲಿಸಲು ರವಿಶಂಕರ್ ಅವರು ಏಕೆ ಹಿಂಜರಿಯುತ್ತಿದ್ದಾರೆ” ಎಂದು ಪ್ರಶ್ನಿಸಿತ್ತು.

ಅದಕ್ಕೆ ಪ್ರಸನ್ನಕುಮಾರ್ ಅವರು “ಒಂದು ದಿನ ಕಾಲಾವಕಾಶ ನೀಡಿದರೆ ಅರ್ಜಿಯಲ್ಲಿನ ದೋಷ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದಕ್ಕೆ ಸಮ್ಮತಿಸಿದ್ದ ಪೀಠವು ಅರ್ಜಿಯಲ್ಲಿನ ದೋಷವನ್ನು ಸರಿಪಡಿಸಲು ಜನವರಿ 23ರ ಬೆಳಗ್ಗೆ 10.30ರವರೆಗೆ ಸಮಯ ನೀಡಿತ್ತು. ಒಂದು ವೇಳೆ ದೋಷ ಸರಿಪಡಿಸದಿದ್ದಲ್ಲಿ, ಅರ್ಜಿದಾರರ ವಿರುದ್ಧದ ತನಿಖೆಗೆ ತಡೆ‌ ನೀಡಿರುವ ಮಧ್ಯಂತರ ಆದೇಶ ತನ್ನಿಂತಾನೇ ರದ್ದಾಗಲಿದೆ ಎಂದು ತಿಳಿಸಿ, ಶುಕ್ರವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿತ್ತು.

ಶುಕ್ರವಾರ ಅರ್ಜಿ ವಿಚಾರಣೆಗೆ ಬಂದಾಗ ವಕೀಲ ಪಿ ಪ್ರಸನ್ನಕುಮಾರ್ ಅವರು, ಅರ್ಜಿಯಲ್ಲಿದ್ದ ದೋಷವನ್ನು ಸರಿಪಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ದಾಖಲಿಸಿಕೊಂಡ ಪೀಠವು ಅರ್ಜಿ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತಲ್ಲದೆ, ಅರ್ಜಿದಾರರ ವಿರುದ್ಧದ ತನಿಖೆಗೆ ತಡೆ ನೀಡಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದ ಸರ್ವೇ ನಂಬರ್ 46, 135, 137, 150, 160, 164/1 ಮತ್ತು 164/2ರಲ್ಲಿನ ವಿವಿಧೆಡೆ ಸರ್ಕಾರಿ ಜಮೀನು, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಶ್ರೀ ರವಿಶಂಕರ್‌ ಮೇಲೆ ಮೇಲ್ನೋಟಕ್ಕೆ ಯಾವುದೇ ಆರೋಪ ಕಾಣುತ್ತಿಲ್ಲ. ವಿಶೇಷ ಸರ್ಕಾರಿ ಅಭಿಯೋಜಕರು ನೇರವಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪೂರಕವಾಗಿ ದಾಖಲೆಗಳನ್ನು ಒದಗಿಸದ ಹೊರತು ಆರೋಪವಿಲ್ಲದೇ ಶ್ರೀ ರವಿಶಂಕರ್‌ ಅವರನ್ನು ಪ್ರಕರಣದಲ್ಲಿ ಎಳೆದು ತರಲಾಗದು. ಹೀಗಾಗಿ, ಮುಂದಿನ ವಿಚಾರಣೆವರೆಗೆ ರವಿಶಂಕರ್‌ ಅವರ ವಿರುದ್ಧದ ತನಿಖೆಗೆ ತಡೆ ನೀಡಲಾಗಿದೆ ಎಂದು ಜನವರಿ 13ರಂದು ನ್ಯಾಯಾಲಯ ಮಧ್ಯಂತರ ಆದೇಶ ಮಾಡಿತ್ತು. ಈಗ ಆದೇಶ ಈಗ ವಿಸ್ತರಣೆಗೊಂಡಿದೆ.