A1
ಸುದ್ದಿಗಳು

ಲಖಿಂಪುರ್ ಖೇರಿ ಪ್ರಕರಣ: ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಿಸಿದ ಅಲಾಹಾಬಾದ್ ಹೈಕೋರ್ಟ್

ಫೆಬ್ರವರಿಯಲ್ಲಿ ಮಿಶ್ರಾ ಅವರಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಏಪ್ರಿಲ್‌ನಲ್ಲಿ ರದ್ದುಗೊಳಿಸಿತ್ತು. ಜೊತೆಗೆ ಹೊಸದಾಗಿ ಪರಿಗಣಿಸುವಂತೆ ಸೂಚಿಸಿ ಹೈಕೋರ್ಟ್‌ಗೆ ಪ್ರಕರಣವನ್ನು ಹಿಂತಿರುಗಿಸಿತ್ತು.

Bar & Bench

ರೈತರು ಸೇರಿದಂತೆ ಎಂಟು ಮಂದಿಯ ಸಾವಿಗೆ ಕಾರಣವಾಗಿದ್ದ ಲಖಿಂಪುರ್‌ ಖೇರಿ ಪ್ರಕರಣದ ಪ್ರಮುಖ ಆರೋಪಿ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಅವರಿಗೆ ಜಾಮೀನು ನೀಡಲು ಅಲಾಹಾಬಾದ್‌ ಹೈಕೋರ್ಟ್‌ ಮಂಗಳವಾರ ನಿರಾಕರಿಸಿದೆ ಎಂದು ವರದಿಯಾಗಿದೆ [ಆಶಿಶ್‌ ಮಿಶ್ರಾ ಅಲಿಯಾಸ್‌ ಮೋನು ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಜುಲೈ 15, 2022 ರಂದು ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ ಇಂದು ಜಾಮೀನು ನಿರಾಕರಿಸಿ ಆದೇಶ ಹೊರಡಿಸಿದೆ. ತೀರ್ಪಿನ ವಿವರವಾದ ಪ್ರತಿ ಇನ್ನಷ್ಟೇ ದೊರೆಯಬೇಕಿದೆ.

ಕೃಷಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಆಶಿಶ್‌ ಮಿಶ್ರಾ ಅವರ ವಾಹನದ ಚಾಲಕ ಜೀವ ಉಳಿಸಿಕೊಳ್ಳುವ ಸಲುವಾಗಿ ವಾಹನ ಹರಿಸಿರುವ ಸಾಧ್ಯತೆ ಇದೆ ಎಂದು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೀವ್ ಸಿಂಗ್ ಅವರು ಈ ಹಿಂದೆ ಮಿಶ್ರಾ ಅವರಿಗೆ ಜಾಮೀನು ನೀಡಿದ್ದರು.

ಆದರೆ ಜಾಮೀನು ನೀಡಿದ ಬಳಿಕ ಉತ್ತರ ಪ್ರದೇಶ ಸರ್ಕಾರ ಜಾಮೀನು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿಲ್ಲ. ಹೈಕೋರ್ಟ್‌ ತಮ್ಮ ವಾದ ಆಲಿಸಿಲ್ಲ. ಹೀಗಾಗಿ ಆದೇಶ ರದ್ದುಗೊಳಿಸುವಂತೆ ಮೃತರ ಕುಟುಂಬ ಸದಸ್ಯರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಏಪ್ರಿಲ್‌ನಲ್ಲಿ ರದ್ದುಗೊಳಿಸಿತ್ತು. ಜೊತೆಗೆ ಪ್ರಕರಣವನ್ನು ಹೊಸದಾಗಿ ಪರಿಗಣಿಸಲು ಸೂಚಿಸಿ ಹೈಕೋರ್ಟ್‌ಗೆ ಮರಳಿಸಿತ್ತು.