Mid day meal 
ಸುದ್ದಿಗಳು

ಮನೆಯಲ್ಲಿ ಮಾಂಸಾಹಾರ ಸೇವಿಸುವುದರಿಂದ ಶಾಲೆಯಲ್ಲಿ ನೀಡುವುದಿಲ್ಲ: ಸುಪ್ರೀಂ ಮುಂದೆ ಲಕ್ಷದ್ವೀಪ ಆಡಳಿತಾಧಿಕಾರಿ ಸಮರ್ಥನೆ

ಮಾಂಸಾಹಾರ ಸೇವನೆ ಲಕ್ಷದ್ವೀಪದ ಎಲ್ಲಾ ಮನೆಗಳಲ್ಲಿ ಸಾಮಾನ್ಯವಾಗಿದ್ದು ಹಣ್ಣು ಮತ್ತು ಒಣ ಹಣ್ಣುಗಳ ಸೇವನೆ ಕಡಿಮೆ ಇದೆ. ಹೀಗಾಗಿ ಬಿಸಿಯೂಟದ ಮೆನುವಿನಲ್ಲಿ ಅವುಗಳನ್ನು ಸೇರಿಸಲಾಗಿದೆ ಎಂದು ಆಡಳಿತಾಧಿಕಾರಿ ತಿಳಿಸಿದ್ದಾರೆ.

Bar & Bench

ಮಾಂಸಾಹಾರ ಸೇವನೆ ಲಕ್ಷದ್ವೀಪದ ಎಲ್ಲಾ ಮನೆಗಳಲ್ಲಿ ಸಾಮಾನ್ಯವಾಗಿದ್ದು ಹಣ್ಣು ಮತ್ತು ಒಣ ಹಣ್ಣುಗಳ ಸೇವನೆ ಕಡಿಮೆ ಇದೆ. ಹೀಗಾಗಿ ಅಲ್ಲಿನ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಿಂದ ಮಾಂಸಾಹಾರ ಕೈಬಿಟ್ಟು ಹಣ್ಣು, ಒಣಹಣ್ಣುಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಲಕ್ಷ್ವದೀಪ ಕೇಂದ್ರಾಡಳಿತ ತಿಳಿಸಿದೆ [ಅಜ್ಮಲ್ ಅಹಮದ್ ಆರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಲಕ್ಷದ್ವೀಪ ಆಡಳಿತದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿ ಕೇರಳ ಹೈಕೋರ್ಟ್‌ ಸೆಪ್ಟೆಂಬರ್ 2021ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಕವರಟ್ಟಿ ದ್ವೀಪದ ನಿವಾಸಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಲಕ್ಷದ್ವೀಪದಲ್ಲಿ ಡೈರಿ ಫಾರ್ಮ್‌ಗಳನ್ನು ಮುಚ್ಚುವ ಮತ್ತು ಮಧ್ಯಾಹ್ನದ ಊಟದ ಮೆನುವಿನಿಂದ ಮಾಂಸವನ್ನು ಕೈಬಿಡುವ ಆಡಳಿತದ ನಿರ್ಧಾರವನ್ನು ಮನವಿಯಲ್ಲಿ ಪ್ರಶ್ನಿಸಲಾಗಿತ್ತು.

ಮನೆಗಳಲ್ಲಿ ಒದಗಿಸುವ ಆಹಾರಕ್ಕೆ ಹೆಚ್ಚುವರಿ ಅಥವಾ ಪರ್ಯಾಯವಾಗಿ ಶಾಲೆಗಳಲ್ಲಿ ಒದಗಿಸುವ ಬಿಸಿಯೂಟ ಇರಬಾರದು ಎಂದು ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ತಮ್ಮ ಪ್ರತಿ-ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಪ್ರತಿ ಅಫಿಡವಿಟ್‌ನ ಪ್ರಮುಖಾಂಶಗಳು

  • ಲಕ್ಷದ್ವೀಪದ ಎಲ್ಲಾ ಮನೆಗಳಲ್ಲಿ ಮಾಂಸ ಮತ್ತು ಕೋಳಿಯೂಟ ಸಾಮಾನ್ಯವಾಗಿದ್ದು ದ್ವೀಪವಾಸಿಗಳಲ್ಲಿ ಹಣ್ಣುಗಳು ಮತ್ತು ಒಣ ಹಣ್ಣುಗಳ ಸೇವನೆ ತುಂಬಾ ಕಡಿಮೆ ಇದೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯಿಂದ ಕೋಳಿ ಮತ್ತಿತರ ಮಾಂಸಾಹಾರವನ್ನು ಕೈಬಿಡಲಾಗಿದೆ. ಹಣ್ಣು ಮತ್ತು ಒಣಹಣ್ಣುಗಳು ಮಧ್ಯಾಹ್ನದ ಊಟದ ಯೋಜನೆಯ ಉದ್ದೇಶಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ.

  • ಮಳೆಗಾಲದಲ್ಲಿ ಕೋಳಿ ಮತ್ತು ಮಾಂಸಾಹಾರ ಸಂಗ್ರಹ ಕಷ್ಟ ಆದರೆ ಮೀನು, ಮೊಟ್ಟೆ ಹಣ್ಣು, ಒಣ ಹಣ್ಣುಗಳು ಅಡೆತಡೆಯಿಲ್ಲದೆ ಲಭಿಸುತ್ತವೆ. ಸೂಕ್ತ ಸಂಗ್ರಹ ವ್ಯವಸ್ಥೆ ಇಲ್ಲದಿರುವುದರಿಂದ ಮಾಂಸ ಮತ್ತು ಚಿಕನ್‌ ಹೊರತಾದ ಬದಲಾದ ಮೆನುವನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಹೆಚ್ಚಿನ ಅವಕಾಶ ಇದೆ.

  • ಕೇವಲ 300ರಿಂದ 400 ವ್ಯಕ್ತಿಗಳಿಗೆ ಹಾಲು ಮತ್ತಿತರ ಆಹಾರ ಪದಾರ್ಥಗಳನ್ನು ನೀಡಬೇಕಿದೆ. ಲಕ್ಷದ್ವೀಪದ ಒಟ್ಟು ಜನಸಂಖ್ಯೆ 20 ಸಾವಿರವಾಗಿದ್ದು ಸಾರ್ವಜನಿಕ ಬೊಕ್ಕಸಕ್ಕೆ ₹ 96 ಲಕ್ಷದಷ್ಟು ನಷ್ಟ ಉಂಟಾಗುವುದರಿಂದ ಪಶುಸಂಗೋಪನಾ ಇಲಾಖೆಯ ಹೈನುಗಾರಿಕೆ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಸಾರ್ವಜನಿಕ ಬೊಕ್ಕಸಕ್ಕೆ ಭಾರಿ ನಷ್ಟ ಉಂಟುಮಾಡುವ ವಾಣಿಜ್ಯ ಚಟುವಟಿಕೆಯಿಂದ ಹೊರಬರುವುದು ಸಾಧಾರವಾಗಿದೆ.

ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಜೂನ್ 22ರಂದು ನೀಡಿದ್ದ ಮಧ್ಯಂತರ ಆದೇಶಕ್ಕೆ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಸುಪ್ರೀಂ ಪೀಠ ಮರುಜೀವ ನೀಡಿತ್ತು. ಮಾಂಸ, ಕೋಳಿ, ಮೀನು, ಮೊಟ್ಟೆ ಮತ್ತಿತರ ಆಹಾರ ಪದಾರ್ಥಗಳಿಂದ ಅಡುಗೆ ತಯಾರಿಸಿ ಬಡಿಸಲು ಆದೇಶಿಸುತ್ತಿದ್ದೇವೆ. ಈ ಹಿಂದೆ ಲಕ್ಷದ್ವೀಪದಲ್ಲಿ ಇದ್ದ ವ್ಯವಸ್ಥೆ ಮುಂದಿನ ಆದೇಶದವರೆಗೆ ಮುಂದುವರೆಯಬೇಕು ಎಂದು ಅದು ತಿಳಿಸಿತ್ತು.