Kerala HC and PP Mohammed Faizal 
ಸುದ್ದಿಗಳು

ಕೊಲೆ ಯತ್ನ ಪ್ರಕರಣ: ಜೈಲು ಶಿಕ್ಷೆ ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋದ ಲಕ್ಷದ್ವೀಪ ಸಂಸದ

Bar & Bench

ಕೊಲೆ ಯತ್ನ ಪ್ರಕರಣದಲ್ಲಿ ತನಗೆ 10 ವರ್ಷಗಳ ಕಠಿಣ ಸೆರೆವಾಸ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮತ್ತು ಲಕ್ಷದ್ವೀಪ ಸಂಸದ ಪಿ ಪಿ ಮೊಹಮ್ಮದ್ ಫೈಜಲ್ ಗುರುವಾರ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ [ಸಯದ್ ಮೊಹಮ್ಮದ್ ನೂರುಲ್ ಅಮೀರ್ ಮತ್ತಿತರರು. ಹಾಗೂ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ನಿನ್ನೆ, ಕವರಟ್ಟಿ ಸೆಷನ್ಸ್ ನ್ಯಾಯಾಲಯ ಐಪಿಸಿ ಸೆಕ್ಷನ್‌ 143 – (ಕಾನೂನುಬಾಹಿರ ಸಭೆ), ಸೆಕ್ಷನ್ 147 – (ಗಲಭೆ), ಸೆಕ್ಷನ್ 148 – (ಮಾರಕ ಆಯುಧದಿಂದ ಗಲಭೆ) ಸೆಕ್ಷನ್ 307 - ಕೊಲೆ ಯತ್ನ; ಸೆಕ್ಷನ್ 324 – (ಸ್ವಯಂಪ್ರೇರಣೆಯಿಂದ ಘಾಸಿಗೊಳಿಸುವಿಕೆ), ಸೆಕ್ಷನ್ 342 (ಅಕ್ರಮ ಬಂಧನ), ಸೆಕ್ಷನ್ 448  (ಅತಿಕ್ರಮ ಪ್ರವೇಶ), ಸೆಕ್ಷನ್ 427 (ಹಾನಿ ಉಂಟುಮಾಡುವ ದುಷ್ಕೃತ್ಯ), ಸೆಕ್ಷನ್ 149 ರೊಂದಿಗೆ ಸೆಕ್ಷನ್ 506 ಸಹವಾಚನ (ಕ್ರಿಮಿನಲ್ ಬೆದರಿಕೆ) ಅಡಿ ಫೈಝಲ್ ಸೇರಿದಂತೆ ನಾಲ್ವರನ್ನು ದೋಷಿಗಳೆಂದು ಘೋಷಿಸಿತ್ತು.

2009ರ ಲೋಕಸಭೆ ಚುನಾವಣೆ ವೇಳೆ ರಾಜಕೀಯ ಗಲಭೆಯೊಂದಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ, ಪಿ ಎಂ ಸಯೀದ್ ಅವರ ಅಳಿಯ ಪಡನತ್‌ ಸಾಲಿಹ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ನಾಲ್ಕೂ ಅಪರಾಧಿಗಳಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ₹ 1 ಲಕ್ಷ ದಂಡ ವಿಧಿಸಲಾಗಿತ್ತು.

ಇಂದು ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿ ಎ ಬದರುದ್ದೀನ್ ಅವರು ಎಲ್ಲಾ ಪಕ್ಷಕಾರರ ವಾದ ಆಲಿಸದೆ ಶಿಕ್ಷೆ ಅಮಾನತುಪಡಿಸುವಂತೆ ಸಂಸದ ಫೈಝಲ್‌ ಅವರು ಕೋರಿದ್ದ ಮನವಿ ಸಂಬಂಧ ಆದೇಶ ನೀಡಲಾಗದು ಎಂದರು. ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಇತರ ಪಕ್ಷಕಾರರಿಗೆ ಅನುಮತಿ ನೀಡಿದ ಪೀಠ ಜನವರಿ 17ಕ್ಕೆ ಪ್ರಕರಣ ಪಟ್ಟಿ ಮಾಡಿತು.