Lalu Yadav 
ಸುದ್ದಿಗಳು

ಐಆರ್‌ಟಿಸಿ ಹಗರಣ: ತಮ್ಮ ಮೇಲಿನ ದೋಷಾರೋಪಣೆ ವಿರುದ್ಧ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಲಾಲು

ಪ್ರಕರಣದ ಸಂಬಂಧ ವಿಶೇಷ ನ್ಯಾಯಾಲಯವು 2025ರ ಅಕ್ಟೋಬರ್ 13ರಂದು ಲಾಲು ಯಾದವ್, ತೇಜಸ್ವಿ ಯಾದವ್, ರಾಬ್ರಿ ದೇವಿ ಹಾಗೂ ಇನ್ನಿತರರ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಆರೋಪ ಹೊರಿಸಿತ್ತು.

Bar & Bench

ಐಆರ್‌ಸಿಟಿಸಿ ಹಗರಣ ಪ್ರಕರಣದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ವಿರುದ್ಧ ಕ್ರಿಮಿನಲ್ ದೋಷಾರೋಪಣೆ ಹೊರಿಸಿರುವ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಪ್ರಕರಣವು ಜನವರಿ 5 ರಂದು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರ ಮುಂದೆ ವಿಚಾರಣೆಗೆ ಬರಲಿದೆ.

ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ (ಪಿಸಿ ಕಾಯಿದೆ) ವಿಶಾಲ್ ಗೋಗ್ನೆ ಅವರು 2025ರ ಅಕ್ಟೋಬರ್ 13 ರಂದು ಲಾಲು ಯಾದವ್, ತೇಜಸ್ವಿ ಯಾದವ್‌, ರಾಬ್ರಿ ದೇವಿ ಹಾಗೂ ಇನ್ನಿತರರ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಆರೋಪ ಹೊರಿಸಿದ್ದರು.

ಲಾಲು ಪ್ರಸಾದ್‌ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿನ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮಕ್ಕೆ( ಐಆರ್‌ಸಿಟಿಸಿ) ಸೇರಿದ ಹೊಟೆಲ್‌ಗಳನ್ನು ಸುಜಾತಾ ಹೊಟೆಲ್ಸ್‌ ಎನ್ನುವ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಟೆಂಡರ್‌ ನಿಯಮಾವಳಿಗಳನ್ನು ಲಾಲು ಮತ್ತವರ ಕುಟುಂಬವು ಬದಲಿಸಿತ್ತು. ಇದಕ್ಕೆ ಬದಲಾಗಿ ಲಾಲು, ಅವರ ಪತ್ನಿ ರಾಬ್ಡಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್‌ ಅವರಿಗೆ ಕೋಟಿಗಟ್ಟಲೆ ಬೆಲೆಬಾಳುವ ಭೂಮಿಯನ್ನು ಕಡಿಮೆ ಬೆಲೆಗೆ ವರ್ಗಾಯಿಸಲಾಗಿತ್ತು ಎಂದು ಸಿಬಿಐ ಆರೋಪಿಸಿತ್ತು.

ಲಾಲು ಮತ್ತವರ ಕುಟುಂಬಸ್ಥರು ತಮ್ಮ ವಿರುದ್ಧದ ತನಿಖೆಯನ್ನು ಪ್ರಶ್ನಿಸಿದ್ದೇ ಅಲ್ಲದೆ, ತಮ್ಮ ವಿರುದ್ಧದ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದರು. ಪ್ರಕರಣ ರಾಜಕೀಯ ಪ್ರೇರಿತ ಎಂದು ಅವರು ವಾದಿಸಿದ್ದರು.

ವಿಚಾರಣಾ ನ್ಯಾಯಾಲಯವು ಅಕ್ಟೋಬರ್ 13 ರಂದು ಹೊರಡಿಸಿದ್ದ ವಿವರವಾದ ಆದೇಶದಲ್ಲಿ, ಲಾಲು ಯಾದವ್ ಅವರಿಗೆ ಈ ಎಲ್ಲ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಅರಿವಿತ್ತು. ಹೋಟೆಲ್‌ಗಳ ವರ್ಗಾವಣೆಯ ವಿಚಾರದಲ್ಲಿ ಅವರ ಮಧ್ಯಪ್ರವೇಶಿಸಿ ಪ್ರಭಾವ ಬೀರಿರುವುದಕ್ಕೆ ಮೇಲ್ನೋಟಕ್ಕೆ ಪುರಾವೆಗಳಿವೆ ಎಂದು ಹೇಳಿದೆ.

ಇಡೀ ಪ್ರಕ್ರಿಯೆಯು ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನೆಪದಲ್ಲಿ ಕ್ರೋನಿ ಕ್ಯಾಪಿಟಲಿಸಂನ (ಬಂಡವಾಳಶಾಹಿ ಶಕ್ತಿಗಳೊಂದಿಗಿನ ಅಪವಿತ್ರ ಮೈತ್ರಿ) ಉತ್ತೇಜನಕ್ಕೆ ಸಮನಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಈ ಪಿತೂರಿಯನ್ನು ಸಂಪೂರ್ಣವಾಗಿ ಮರೆಮಾಚಲಾಗಿಲ್ಲ; ಇಡೀ ವಹಿವಾಟು ಮೇಲ್ನೋಟಕ್ಕೆ ವಂಚನೆಯಿಂದ ಕೂಡಿರುವುದು ಕಂಡುಬರುತ್ತದೆ. ಈ ಹಂತದಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.