Justice K S Hemalekha 
ಸುದ್ದಿಗಳು

ನೈಸ್‌ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ: 17 ವರ್ಷಗಳ ಹಿಂದಿನ ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್‌

ತಮಗೆ ಸೇರಿದ ಆಸ್ತಿಯ ಸರ್ವೇ ನಂಬರ್‌ನಲ್ಲಿ ರ‍್ಯಾಂಪ್‌/ಲಿಂಕ್‌ ಬದಲಾವಣೆ ಇತ್ಯಾದಿಯನ್ನು ಯೋಜಿಸಲಾಗಿಲ್ಲ ಎಂದು 2025ರ ಜೂನ್‌ನಲ್ಲಿ ಬಿಎಂಐಸಿಪಿಯ ಯೋಜನಾಧಿಕಾರಿಯು ತಿಳಿಸಿದ್ದರು ಎಂದು ರತ್ನಾ ರೆಡ್ಡಿ ವಾದಿಸಿದ್ದರು.

Bar & Bench

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ ಯೋಜನೆಗಾಗಿ (ನೈಸ್‌ ರಸ್ತೆ ನಿರ್ಮಾಣ) 17 ವರ್ಷಗಳ ಹಿಂದೆ ಬೆಂಗಳೂರು ದಕ್ಷಿಣದ ತಲಘಟ್ಟಪುರದಲ್ಲಿ ಒಂದು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಬೆಂಗಳೂರಿನ ಯಲಚೇನಹಳ್ಳಿಯ ರತ್ನಾ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಅರ್ಜಿದಾರರ ಭೂಮಿಯ ಸರ್ವೇ ನಂಬರಿಗೆ ಸೀಮಿತವಾಗಿ ಅಧಿಸೂಚನೆಯನ್ನು ರದ್ದುಪಡಿಸಿದೆ.

“ಅಂತಿಮ ಅಧಿಸೂಚನೆಯಾಗಿ 17 ವರ್ಷಗಳಾದರೂ ಪರಿಹಾರ ನೀಡಿಲ್ಲ. ಪ್ರತಿವಾದಿಗಳು ಇದಕ್ಕೆ ಯಾವುದೇ ಸೂಕ್ತ ವಿವರಣೆ ನೀಡಿಲ್ಲ. ಇಂತಹ ಅಸಾಧಾರಣ ನಿಷ್ಕ್ರಿಯತೆಯು ಕಾನೂನನ್ನು ವಿಫಲಗೊಳಿಸುವುದರ ಜೊತೆಗೆ ಸ್ವಾಧೀನವನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ, ಅರ್ಜಿದಾರರ ವಾದದಲ್ಲಿ ಹುರುಳಿದೆ” ಎಂದು ಭೂಸ್ವಾಧೀನವನ್ನು ನ್ಯಾಯಾಲಯ ವಜಾಗೊಳಿಸಿದೆ.

ರತ್ನಾ ರೆಡ್ಡಿ ಪರ ಹಿರಿಯ ವಕೀಲ ಎಚ್‌ ಎನ್‌ ಶಶಿಧರ ಅವರು “ಹಲವು ವರ್ಷಗಳವರೆಗೆ ಭೂಸ್ವಾಧೀನ ಮಾಡಿಕೊಂಡಿರುವುದಕ್ಕೆ ಪರಿಹಾರ ಪಾವತಿಸದೇ ಇರುವುದರಿಂದ ಸ್ವಾಧೀನ ಪ್ರಕ್ರಿಯೆಯು ಸಿಂಧುವಾಗುವುದಿಲ್ಲ. ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ರತ್ನಾ ರೆಡ್ಡಿಯವರಿಂದ ಪಡೆಯಲು ಯಾವುದೇ ಕ್ರಮಕೈಗೊಂಡಿಲ್ಲ. ಭೂಮಿಯು ಇಂದಿಗೂ ಅವರ ಬಳಿಯೇ ಇದೆ. ಬಿಎಂಐಸಿಪಿಯು ನಿಯಮಕ್ಕೆ ವಿರುದ್ಧವಾಗಿ ಹಿಂಬರಹ ನೀಡಿದ್ದು, ನಂದಿ ಮೂಲಸೌಕರ್ಯ ಕಾರಿಡಾರ್‌ ಸಂಸ್ಥೆಯು (ನೈಸ್‌) ಆಕ್ಷೇಪಾರ್ಹವಾದ ಭೂಮಿಯು ಬೇರೊಂದು ಕಾರಣಕ್ಕೆ ಬೇಕು ಎಂದು ಹೇಳಲಾಗದು. ನೈಸ್‌ ಸಂಸ್ಥೆಯು ರಿಯಾಯಿತಿದಾರ ಮಾತ್ರ, ಬಿಎಂಐಸಿಪಿಯ ತಾಂತ್ರಿಕ ನಿರ್ಣಯವನ್ನು ನೈಸ್‌ ಅತಿಕ್ರಮಿಸಲಾಗದು” ಎಂದಿದ್ದರು.

“554 ಎಕರೆ ಹೆಚ್ಚುವರಿ ಭೂಮಿಯನ್ನು ವರ್ಗಾಯಿಸಲಾಗಿದ್ದು, ಮುಂದೆ ಯಾವುದೇ ಭೂಮಿಯನ್ನು ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಅಫಿಡವಿಟ್‌ ಸಲ್ಲಿಸಿದೆ” ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ರಾಜ್ಯ ಸರ್ಕಾರದ ಪರ ವಕೀಲ ರವೀಂದ್ರ ರೆಡ್ಡಿ ಅವರು “ಪ್ರಾಥಮಿಕ ಅಧಿಸೂಚನೆಯು 19ವರ್ಷಗಳ ಹಿಂದೆ ನಡದಿದ್ದು, ಅರ್ಜಿದಾರರು ತಡವಾಗಿ ನ್ಯಾಯಾಲಯದ ಮುಂದೆ ಬಂದಿದ್ದಾರೆ. ಕನಕಪುರ ರಸ್ತೆ ಮತ್ತು ಬಿಎಂಐಸಿಪಿ ಫೆರಿಫೆರಲ್‌ ರಸ್ತೆಗೆ ರ್ಯಾಂಪ್‌ ನಿರ್ಮಿಸಲು ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಅರ್ಜಿದಾರರು ಭೂಮಿಯ ಸ್ವಾಧೀನ ನೀಡದೇ ಇರುವುದರಿಂದ ಬೇರೆಯ ಕಡೆ ತಾತ್ಕಾಲಿಕ ರ‍್ಯಾಂಪ್‌ ನಿರ್ಮಿಸಲಾಗಿದೆ” ಎಂದಿದ್ದರು.

2008ರಲ್ಲಿ ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಡಿಸಿದ್ದರೂ 17 ವರ್ಷಗಳು ಆದ ಬಳಿಕವೂ ರಾಜ್ಯ ಸರ್ಕಾರವು ಭೂಮಿಯನ್ನು ವಶಕ್ಕೆ ಪಡೆದಿಲ್ಲ ಮತ್ತು ಪರಿಹಾರವನ್ನು ಪಾವತಿಸಿಲ್ಲ. ಇನ್ನೂ ಭೂಮಿಯು ತನ್ನ ಸುಪರ್ದಿಯಲ್ಲಿಯೇ ಇದೆ. 2025ರ ಜೂನ್‌ನಲ್ಲಿ ಬಿಎಂಐಸಿಪಿಯ ಯೋಜನಾಧಿಕಾರಿಯು ರತ್ನಾ ರೆಡ್ಡಿ ಅವರಿಗೆ ಸೇರಿದ ಆಸ್ತಿಯ ಸರ್ವೇ ನಂಬರ್‌ನಲ್ಲಿ ರ‍್ಯಾಂಪ್‌/ಲಿಂಕ್‌ ಬದಲಾವಣೆ ಇತ್ಯಾದಿಯನ್ನು ಯೋಜಿಸಲಾಗಿಲ್ಲ ಎಂದು ತಿಳಿಸಿದ್ದರು ಎಂದು ಅರ್ಜಿದಾರರು ವಾದಿಸಿದ್ದರು.

Rathna Reddy Vs State of Karnataka.pdf
Preview